ಕಾಡಾನೆಗಳ ಹಾವಳಿ, ಜನಸಾಮಾನ್ಯರ ಮೇಲೆ ಲಾಠಿಚಾರ್ಜ್: ನಾಲ್ಕು ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗಳು ಇಲ್ಲಿವೆ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿನಿಂದಂತೂ ಕಾಡಾನೆಗಳ ಹಾವಳಿ ಎಲ್ಲೆ ಮೀರಿದೆ. ಕೇವಲ ನಾಲ್ಕು ತಿಂಗಳಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಕಾಡಾನೆಗಳ ಹಾವಳಿ, ಜನಸಾಮಾನ್ಯರ ಮೇಲೆ ಲಾಠಿಚಾರ್ಜ್: ನಾಲ್ಕು ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗಳು ಇಲ್ಲಿವೆ
ಕಾಡಾನೆಗಳ ಅಟ್ಟಹಾಸ, ಜನಸಾಮಾನ್ಯರ ಮೇಲೆ ಲಾಠಿಚಾರ್ಜ್: ನಾಲ್ಕು ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗಳು ಇಲ್ಲಿವೆ
TV9kannada Web Team

| Edited By: Rakesh Nayak Manchi

Nov 24, 2022 | 7:33 AM

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇಲ್ಲಿವರೆಗೂ ತೋಟ-ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಇದೀಗ ಕಾಫಿನಾಡಿನಲ್ಲಿ ತಿಂಗಳಿಗೊಬ್ಬರಂತೆ ಅಮಾಯಕರನ್ನ ಬಲಿ ಹಾಕುತ್ತಿವೆ. ಈ ಹಿಂದೆ ಕೂಡ ಕಾಡಾನೆ ದಾಳಿಯಿಂದ ಹಲವರು ಜೀವವನ್ನ ಕಳೆದುಕೊಂಡಿದ್ದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದಂತೂ ಕಾಡಾನೆಗಳ ಹಾವಳಿ ಎಲ್ಲೆ ಮೀರಿದೆ. ಕೇವಲ ನಾಲ್ಕು ತಿಂಗಳಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ದಾಳಿ (Wild elephant attack)ಯನ್ನ ಪ್ರಶ್ನೆ ಮಾಡಿದ್ದಕ್ಕೆ ಜನರಿಗೆ ಲಾಠಿ ಏಟು ಬಿದ್ದಿದೆ. ಅಮಾಯಕರ ಮೇಲೆ ಪ್ರಕರಣಗಳು ಬಿದ್ದು ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ. ಅಷ್ಟಕ್ಕೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ (Coffee Nadu Chikkamagaluru) ಏನೆಲ್ಲಾ ಬೆಳೆವಣಿಗೆಗಳು ನಡೆದಿವೆ ಎಂಬುದು ಇಲ್ಲಿದೆ.

ಹಸುವನ್ನ ಹುಡುಕಿಕೊಂಡು ಹೋದ ವ್ಯಕ್ತಿ ನಿಗೂಢ ಕಣ್ಮರೆ

ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರು ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಕಾಡಾನೆ ದಾಳಿಗೆ ಬಲಿಯಾಗಿದ್ದರು. ಮೇಯಲು ಬಿಟ್ಟ ಹಸು ಮನೆಗೆ ವಾಪಸ್ ಆಗದ್ದನ್ನು ಗಮನಿಸಿ ಹಸುವನ್ನು ಹುಡುಕಿಕೊಂಡು ಹೊರಟ ಆನಂದ್ ದೇವಾಡಿಗ ಅವರನ್ನು ಪುಂಡಾನೆಯೊಂದು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಬಲಿ ಪಡೆದಿತ್ತು. ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಆನಂದ್ ದೇವಾಡಿಗರ ಮೃತದೇಹದ ಭಾಗಗಳು ಅಲ್ಲಲ್ಲಿ ಪತ್ತೆಯಾಗಿದ್ದವು. ಈ ದೃಶ್ಯವನ್ನ ನೋಡಿದ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಮನೆಗೆ ಆಧಾರಸ್ತಂಭವಾಗಿದ್ದ ಯಜಮಾನನನ್ನ ಕಳೆದುಕೊಂಡು ಪತ್ನಿ, ಮಕ್ಕಳು ಕಣ್ಣೀರಿಟ್ಟಿದ್ದರು. ಅಷ್ಟು ಹೀನಾಯವಾಗಿ ಅಮಾಯಕ ವ್ಯಕ್ತಿಯನ್ನ ಕಾಡಾನೆ ಬಲಿ ಪಡೆದಿತ್ತು. ಪುಂಡಾನೆಯನ್ನ ಸೆರೆ ಹಿಡಿಯುವಂತೆ ಜನರು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ತೋಟದಿಂದ ಕೆಲಸ ಮುಗಿಸು ಮನೆಗೆ ಹೊರಟವನ ಮೇಲೆ ದಾಳಿ

ಕಾಡಾನೆ ದಾಳಿಗೆ ಹಾರ್ಗೋಡು ಗ್ರಾಮದಲ್ಲಿ ಆನಂದ್ ಎಂಬುವರು ಬಲಿಯಾಗಿ ಒಂದು ತಿಂಗಳು ಆಗುವ ಮುನ್ನವೇ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಅರ್ಜುನ ಎಂಬ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಕೊಂದು ಹಾಕಿತ್ತು. ತೋಟದಿಂದ ಕೆಲಸ ಮುಗಿಸಿಕೊಂಡು ಮನೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ಕಾಡಾನೆ ದಾಳಿಯಿಂದ ವಿಚಲಿತರಾದ ಜನರು ಘಟನೆಯ ಮರುದಿನ (ಸೆಪ್ಟಂಬರ್ 9) ಮೂಡಿಗೆರೆ ಅರಣ್ಯ ಇಲಾಖೆ ಎದುರು ಅರ್ಜುನ್ ಮೃತದೇಹ ಇಟ್ಟು ಬೃಹತ್ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಖಂಡಿಸಿ ಜನರು ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದ ಘಟನೆ ನಡೆದಿತ್ತು. ಈ ವೇಳೆ ಪೊಲೀಸರು, ನ್ಯಾಯ ಕೇಳಲು ಬಂದವರಿಗೆ ಲಾಠಿ ಏಟು ನೀಡಿದ್ದರು. ಪೊಲೀಸರ ಲಾಠಿ ಚಾರ್ಜ್​​ನಿಂದ ರೋಸಿಹೋದ ಜನರು, ನ್ಯಾಯ ಕೇಳುವುದೇ ತಪ್ಪಾ ಅಂತಾ ಪ್ರಶ್ನೆ ಮಾಡಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಲವರ ಮೇಲೆ ಪ್ರಕರಣ ಕೂಡ ದಾಖಲಿಸಲಾಯಿತು.

ಹಸುವಿಗೆ ಹುಲ್ಲು ಕೊಯ್ಯುವಾಗ ಮಹಿಳೆ ಮೇಲೆ ಕಾಡಾನೆ ದಾಳಿ

ಮೂಡಿಗೆರೆ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನರು ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ಮಹಿಳೆ ಕಾಡಾನೆ ದಾಳಿಗೆ ಬೆಳ್ಳಂಬೆಳಗ್ಗೆ ಬಲಿಯಾಗಿದ್ದರು. ಹಸುವಿಗೆ ಮೇವು ತರಲು ಪತಿ ಸತೀಶ್ ಜೊತೆ ತೋಟಕ್ಕೆ ಹೋಗಿದ್ದಾಗ ದಂಪತಿ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಲು ಮುಂದಾಯ್ತು. ಆ ವೇಳೆ ಪತಿ ಸತೀಶ್ ಓಡಿ ಹೋಗಿ ಬಚಾವಾದರೆ ಅವರ ಪತ್ನಿ ಶೋಭಾರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆನೆ ಸೊಂಡಿಲಿಗೆ ಸಿಕ್ಕಿಹಾಕಿಕೊಂಡರು. ನೋಡನೋಡುತ್ತಲೇ ಆನೆ ಮಹಿಳೆಯನ್ನು ಬಲಿಪಡೆದುಕೊಂಡಿತು. ಈ ವೇಳೆ ಜನರ ಬೊಬ್ಬೆಗೆ ಆನೆ ಸ್ಥಳದಿಂದ ಓಡಿಹೋಗಿತ್ತು.

ಹರಿದ ಬಟ್ಟೆಯಲ್ಲಿ ವಿಡಿಯೋ ಮಾಡಿ ಜನರೇ ನನ್ನ ಮೇಲೆ ಹಲ್ಲೆ ಮಾಡಿದರು ಎಂದ ಶಾಸಕ!

ಕಾಫಿನಾಡಿನಲ್ಲಿ ಕಾಡಾನೆ ದಾಳಿಯಿಂದ ಒಂದೊಂದು ಹೆಣ ಬಿದ್ದಾಗ ನ್ಯಾಯ ಕೇಳಲು ಬಂದ ಜನರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್​ ನಡೆಸಲಾಗಿದೆ. ನವೆಂಬರ್ 20ರಂದು ಕೂಡ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಮಹಿಳೆ ಸಾವನ್ನಪ್ಪಿದ್ದಾಗ ಜನರು ಸಹಜವಾಗಿಯೇ ಆಕ್ರೋಶಗೊಂಡಿದ್ದರು. ಗ್ರಾಮಕ್ಕೆ ತಡವಾಗಿ ಭೇಟಿ ನೀಡಿದ ಶಾಸಕ ಕುಮಾರಸ್ವಾಮಿಯವರ ನಡೆಯನ್ನ ಗ್ರಾಮಸ್ಥರು ಪ್ರಶ್ನೆ ಮಾಡಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಶಾಸಕರ ನಡುವೆ ಮಾತಿನ ಚಕಾಮಕಿ ನಡೆಯಿತು. ಪರಿಸ್ಥಿತಿ ಕೈ ಮೀರಬಹುದು ಎಂದು ತಿಳಿದ ಪೊಲೀಸರು, ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು. ಆಕ್ರೋಶ ಭುಗಿಲೆದ್ದಾಗ ಶಾಸಕ ಕುಮಾರಸ್ವಾಮಿಯವರನ್ನ ಜೀಪಿನಲ್ಲಿ ಕೂರಿಸಿಕೊಂಡು ಬಂದು ಮೂಡಿಗೆರೆಗೆ ಬಿಟ್ಟಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಜನರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹರಿದ ಬಟ್ಟೆಯಲ್ಲೇ ಸ್ವತಃ ಶಾಸಕರೇ ವಿಡಿಯೋ ಮಾಡಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇನ್ನೂ ಗ್ರಾಮದಿಂದ ಸುರಕ್ಷಿತವಾಗಿ ಮರಳಿದ ಶಾಸಕರ ಬಟ್ಟೆ ಹೇಗೆ ಹರಿಯಿತು? ಶಾಸಕರೇ ಕಟ್ಟು ಕಥೆ ಕಟ್ಟಿದ್ದಾರೆಯೇ ಅಂತಾ ಜನಸಾಮಾನ್ಯರು ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ನವೆಂಬರ್ 21ರಂದು ಸುದ್ದಿಗೋಷ್ಠಿ ಮಾಡಿ ಶಾಸಕ ಎಂಪಿ ಕುಮಾರಸ್ವಾಮಿ ಸಮಜಾಯಿಷಿ ಕೂಡ ಕೊಟ್ಟಿದ್ದಾರೆ.

ಕಾಫಿನಾಡಿನಲ್ಲಿ ಸರಣಿ ಸಾವಿನ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ

ಕಾಡಾನೆಗಳ ವಿಪರೀತ ಹಾವಳಿಯಿಂದ ಬೇಸತ್ತ ಜನರಲ್ಲಿ ಆಕ್ರೋಶ ಭುಗಿಲೆದ್ದಿತು. ಇದನ್ನು ಗಮನಿಸಿದ ರಾಜ್ಯ ಸರ್ಕಾರ, ಕೊನೆಗೂ ಜನರ ಮನವಿಗೆ ಸ್ಪಂದಿಸುವ ಕೆಲಸ ಮಾಡಿತು. ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನ ಗುರುತಿಸಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. ಆ ಮೂಲಕ ಕಾಫಿನಾಡಿನ ಜನರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.

ಈ ಬಾರಿಯಾದರೂ ಕಾಡಾನೆ ಸೆರೆಹಿಡಿಯಿರಿ ಎನ್ನುತ್ತಿದ್ದ ಜನರಿಗೆ ನಿರಾಸೆ

ಎರಡು ವಾರದ ಹಿಂದೆ ಕೂಡ ಊರುಬಗೆ ಸುತ್ತಮುತ್ತ ಭಾರೀ ತೊಂದರೆ ಕೊಡುತ್ತಿದ್ದ ಪುಂಡಾನೆಯನ್ನ ಸೆರೆ ಹಿಡಿಯಲು ದುಬಾರೆ, ನಾಗರಹೊಳೆ ಆನೆ ಶಿಬಿರದಿಂದ ಆರು ದಸರಾ ಆನೆಗಳು ಬಂದಿದ್ದವು. ಒಂದು ವಾರ ಹುಡುಕಿದರೂ ಪುಂಡಾನೆಯ ಸುಳಿವು ದಸರಾ ಆನೆಗಳಿಗೆ ಸಿಗಲೇ ಇಲ್ಲ. ಆದರೆ ಕಾರ್ಯಾಚರಣೆಯಲ್ಲಿದ್ದ ದಸರಾ ಆನೆಗಳ ಆರೋಗ್ಯ ಹದೆಗೆಟ್ಟಿದ್ದರಿಂದ ಅಧಿಕಾರಿಗಳು, ಕಾರ್ಯಾಚರಣೆಯನ್ನ ಮೊಟಕುಗೊಳಿಸಿ ದಸರಾ ಆನೆಗಳನ್ನ ವಾಪಸ್ ಕರೆದುಕೊಂಡು ಹೋಗಿದ್ದರು. ಅರಣ್ಯ ಅಧಿಕಾರಿಗಳ ಈ ನಡೆಗೆ ಜನಸಾಮಾನ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada