KRS Brindavan Garden: ಚಿರತೆ ಭಯಕ್ಕೆ ಕೆಆರ್‌ಎಸ್ ಬೃಂದಾವನ ಬಂದ್, 15 ದಿನಗಳಲ್ಲಿ ₹50 ಲಕ್ಷಕ್ಕೂ ಹೆಚ್ಚು ನಷ್ಟ
ಬೃಂದಾವನ ಬಂದ್ ಮಾಡಿ 15 ದಿನಗಳು ಕಳೆದಿವೆ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ(Mysuru) ಪ್ರವಾಸಿ ತಾಣವಾಗಿರುವ ಕೆಆರ್‌ಎಸ್ ಬೃಂದಾವನದಲ್ಲಿ(KRS Brindavan Garden) ಚಿರತೆ(Leopard) ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ನ.6ರಿಂದ ಅಂದರೆ ಸುಮಾರು 15 ದಿನಗಳಿಂದ ಬೃಂದಾವನ ಉದ್ಯಾನವನವನ್ನು ಬಂದ್ ಮಾಡಲಾಗಿದೆ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಜೊತೆಗೆ ಅರ್ಧ ತಿಂಗಳು ಕಳೆದರೂ ಚಿರತೆಯನ್ನು ಹಿಡಿದಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 21ರಿಂದ ಬೃಂದಾವನ ಗಾರ್ಡನ್ನಲ್ಲಿ ಚಿರತೆ ನಾಲ್ಕು ಬಾರಿ ಕಾಣಿಸಿಕೊಂಡಿದೆ. ಹೀಗಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನ.6ರಿಂದ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರು. ಆದ್ರೆ ಬೃಂದಾವನ ಬಂದ್ ಮಾಡಿ 15 ದಿನಗಳು ಕಳೆದಿವೆ. ಅಲ್ಲದೆ ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಇನ್ನು ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಜನರು ಭೇಟಿ ನೀಡುತ್ತಾರೆ. ಆದ್ರೆ ಬೃಂದಾವನ ಬಂದ್ ಮಾಡಿರುವುದರಿಂದ ಪ್ರವಾಸಿಗರಿಲ್ಲದೆ ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಇದನ್ನೂ ಓದಿ: ಕಾಡಾನೆಗಳ ಹಾವಳಿ, ಜನಸಾಮಾನ್ಯರ ಮೇಲೆ ಲಾಠಿಚಾರ್ಜ್: ನಾಲ್ಕು ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗಳು ಇಲ್ಲಿವೆ
ಬೃಂದಾವನಕ್ಕೆ ತಲಾ ₹ 50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 15 ದಿನಗಳಿಂದ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಆದಾಯ ಬರುತ್ತಿಲ್ಲ. ಮತ್ತೊಂದೆಡೆ ಇಷ್ಟು ದಿನ ಕಳೆದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು ಕೆಆರ್‌ಎಸ್‌ನ ಬೃಂದಾವನ ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ನೂರಾರು ವ್ಯಾಪಾರಿಗಳಿಗೆ ಈಗ ವ್ಯಾಪಾರವಿಲ್ಲದಂತಾಗಿದೆ. ಬೃಂದಾವನದಲ್ಲಿದ್ದ ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ನೂರಾರು ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬೃಂದಾವನದ ಒಳಗಿರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳು ಕೂಡ ಪ್ರವಾಸಿಗರಿಲ್ಲದೇ ನಷ್ಟ ಅನುಭವಿಸುತ್ತಿವೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:46 am, Thu, 24 November 22