ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ: ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಈಗ ಹೇಗಿದೆ?
Communal Violence Erupted In Shivamogga: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಇದರಿಂದ ಶಿವಮೊಗ್ಗ ರಣಾಂಗಣ ಆಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವ ಮಟ್ಟಿಗೆ ಪೊಲೀಸರನ್ನು ನಿಯೋಜಿಸಲಾಗಿದೆ ಅಂದ್ರೆ ನಗರದಲ್ಲಿ ಎಲ್ಲಿ ನೋಡಿದರೂ ಪೊಲೀಸರ ಬೂಟಿನ ಸದ್ದೇ ಕೇಳುತ್ತಿದೆ.
ಶಿವಮೊಗ್ಗ, (ಅಕ್ಟೋಬರ್ 02): ಮಲೆನಾಡು ಶಿವಮೊಗ್ಗ (Shivamogga) ಮತ್ತೆ ಯುದ್ಧ ಭೂಮಿ ಆಗಿದೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ನಿನ್ನೆ(ಅಕ್ಟೋಬರ್ 01) ಸಂಜೆ ಕಲ್ಲು ತೂರಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಶಿವಮೊಗ್ಗದ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಘಟನೆ ನಡೆದ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಈದ್ ಮಿಲಾದ್ ಅಂಗವಾಗಿ ಶಿವಮೊಗ್ಗದಲ್ಲಿ ಬೃಹತ್ ಮಟ್ಟದಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು. ಮೆರವಣಿಗೆ ರಾಗಿಗುಡ್ಡ ತಲುಪಿದ ವೇಳೆ ಕಟೌಟ್ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ. ಈ ವೇಳೆ ಕೆಲ ವ್ಯಕ್ತಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದ ಪರಿಣಾಮ 7ಕ್ಕೂ ಹೆಚ್ಚು ಕಾರುಗಳು ಹಾಗೂ ಮನೆಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಲ್ಲು ತೂರಾಟದಿಂದ ಕೆಲವರಿಗೆ ಗಂಭೀರ ಗಾಯಗಳು ಸಹ ಆಗಿವೆ. ಘಟನೆಯಲ್ಲಿ 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ
ರಾಗಿ ಗುಡ್ಡ, ಶಾಂತಿನಾಗರದಲ್ಲಿ ಪೊಲೀಸ್ ಹದ್ದಿನ ಕಣ್ಣು
ಗಲಾಟೆ ಬಳಿಕ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ ಜನ ಆತಂಕಕ್ಕೀಡಾಗಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಬಳಿಕ ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಸಹ ಶಾಂತಿನಾಗರದಲ್ಲಿ ಪೊಲೀಸ್ ಹದ್ದಿನ ಕಣ್ಣಿಟ್ಟಿದ್ದು, ಶಿವಮೊಗ್ಗದಲ್ಲಿ ಎಲ್ಲಿ ನೋಡಿದ್ರು ಪೊಲೀಸರ ಬೂಟಿನ ಸದ್ದೇ ಕೇಳುತ್ತಿದೆ. ರ್ಯಾಪಿಡ್ ಆ್ಯಕ್ಷನ್ ಫೋರ್ಸ್ , ಕ್ಯೂಆರ್ಟಿ ವಜ್ರ, ಆರ್ಎಎಫ್, KSRP ಮತ್ತು DAR ತುಕಡಿ ನಿಯೋಜಿಸಲಾಗಿದ್ದು, ಶಿವಮೊಗ್ಗದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾರೆ. ಇನ್ನು ಮನೆಯಿಂದ ಹೊರಬಂದವರನ್ನು ವಾಪಸ್ ಕಳಿಸುತ್ತಿದ್ದಾರೆ.
ವಾಹನಗಳ ತಪಾಸಣೆ
ಮುಂಜಾಗ್ರತಾ ಕ್ರಮವಾಗಿ ಶಾಂತಿನಗರ ಮುಖ್ಯ ರಸ್ತೆಯ ಮೂಲಕ ರಾಗಿ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಶಾಂತಿ ನಗರಕ್ಕೆ ಪ್ರವೇಶಿಸುವ ಮತ್ತು ಹೊರ ಬರುವ ವಾಹನಗಳ ತಡೆದು ಪೊಲೀಸರು ತಪಾಸಣೆ ಮಾಡಿ ಕಳುಹಿಸುತ್ತಿದ್ದಾರೆ. ಅನುಮಾನಾಸ್ಪದವಾಗಿ ತಿರುಗಿದವರ ಬೈಕ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಬಿಗಿ ಬಂದೋಬಸ್ತ್ನಿಂದಾಗಿ ಇದೀಗ ಶಿವಮೊಗ್ಗ ಪೊಲೀಸರು ಸಂಪೂರ್ಣ ಹತೋಟಿಗೆ ತಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Mon, 2 October 23