ಶಿವಮೊಗ್ಗ: 4 ವರ್ಷದ ಮಗು ಕೂದಲೆಳೆ ಅಂತರದಲ್ಲಿ ಪಾರು ! ರಾಗಿಗುಡ್ಡದ ಕಲ್ಲು ತೂರಾಟದ ಕರಾಳತೆ ಬಿಚ್ಚಿಟ್ಟ ಹಿಂದೂಗಳು
ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ವೇಳೆ ಗಾಯಗೊಂಡ ಹಿಂದೂಗಳು ಟವಿ9 ಮುಂದೆ ಘಟನೆಯ ಕರಾಳ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.
ಶಿವಮೊಗ್ಗ ಅ.02: ಶಿವಮೊಗ್ಗ (Shivamogga) ಹರೊವಲಯದ ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ಕಲ್ಲು ತೂರಾಟ (Stone Petling) ನಡೆದಿತ್ತು. ಇದರ ಬೆನ್ನಲ್ಲೇ ಘರ್ಷಣೆ ಭುಗಿಲೆದ್ದಿತ್ತು. ಮೆರವಣಿಗೆಯಲ್ಲಿದ್ದ ಜನರು ಸುತ್ತಮುತ್ತಲಿನ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ಗಾಜುಗಳು ಪುಡಿ ಪುಡಿಯಾಗಿವೆ. ಅಲ್ಲದೆ ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಲ್ಲು ತೂರಾಟದ ವೇಳೆ ಗಾಯಗೊಂಡ ಹಿಂದೂಗಳು ಟವಿ9 ಮುಂದೆ ಘಟನೆಯ ಕರಾಳ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.
ಕಲ್ಲು ತೂರಾಟದಲ್ಲಿ ಗಾಯಗೊಂಡ ಮಾರುತಿ ಎಂಬುವರ ಪತ್ನಿ ಮಾತನಾಡಿ “ನನ್ನ ಪತಿಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನನ್ನ ಮಗನ ಮೇಲೆ ಕಲ್ಲನ್ನ ಎತ್ತಿ ಹಾಕಲು ಯತ್ನಿಸಿದರು. ಹೆದರಿ ಮನೆಯ ಬಾಗಿಲು ಹಾಕುತ್ತಿದ್ದಂತೆ ಮನೆ ಮೇಲೆ ಕಲ್ಲು ತೂರಿದರು. ಸ್ವಲ್ಪ ಸಮಯದ ನಂತರ ಅಕ್ಕ ಪಕ್ಕದ ಮನೆಯವರು ಒಂದಾಗಿ ಹೊರಬಂದು ನಿಂತಿದ್ವಿ. ಅಕ್ಕ ಪಕ್ಕದ ಮನೆಯವರು ನಾವೆಲ್ಲ ಸೇರಿ ದೊಣ್ಣೆ ಮತ್ತು ಕಲ್ಲನ್ನು ಹಿಡಿದು ನಮ್ಮನ್ನು ರಕ್ಷಣೆ ಮಾಡಿಕೊಂಡ್ವಿ. ಮನೆಯ ದೂರದಲ್ಲಿ ನಿಂತು ಕೆಲ ಗುಂಪು ಕಲ್ಲನ್ನ ಬೀಸಿದರು” ಎಂದು ಹೇಳಿದರು.
ಪ್ರಾಣ ಉಳಿದಿದ್ದೇ ಹೆಚ್ಚು
ಲಕ್ಷ್ಮಣಗೌಡ ಮತ್ತು ಸುಚಿತ್ರಾ ಎಂಬುವರ ಮನೆ ಮೇಲೂ ಕಲ್ಲು ತೂರಲಾಗಿದೆ. ಮನೆಯಲ್ಲೇ ಇದ್ದ ಲಕ್ಷ್ಮಣಗೌಡ ದಂಪತಿ ಮತ್ತು ನಾಲ್ಕು ವರ್ಷದ ಮಗು ರಕ್ಷಿತಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ರಕ್ಷಿತಾ ಪೋಷಕರು ಪ್ರಾಣ ಉಳಿದಿದ್ದೇ ಹೆಚ್ಚು ಎಂದು ನೋವು ಹೊರಹಾಕಿದ್ದಾರೆ.
ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡದಂತಿರುವ ಈದ್ ಮಿಲಾದ್ ಕಟೌಟ್ ವಿವಾದ: ಏನಿದು ವಿವಾದ? ಆರಂಭವಾಗಿದ್ದೇಗೆ? ಇಲ್ಲಿದೆ ವಿವರ
9 ಮನೆಗಳ ಮೇಲೆ ಕಲ್ಲು ತೂರಾಟ
ರಾಗಿಗುಡ್ಡದಲ್ಲಿ ಅನೇಕ ಮನೆಗಳ ಮೇಲೆ ಕಲ್ಲು ತೂರಲಾಗಿದೆ. ರಾಗಿಗುಡ್ಡದ 8/1ನೇ ಕ್ರಾಸ್ನಲ್ಲಿ ಒಟ್ಟು 9 ಮನೆಗಳ ಮೇಲೆ ಕಲ್ಲು ತೂರಲಾಗಿದೆ. ಲೋಕೇಶ್, ರಮಾ ಬಾಯಿ, ಪ್ರಸನ್ನ ಕುಮಾರ್, ವೆಂಕಟೇಶ್ ಮತ್ತು ಲಕ್ಷ್ಮಣ ಸೇರಿದಂತೆ ಅನೇಕರ ಮನೆಗಳ ಮೇಲೆ ಕಲ್ಲು ತೂರಾಟವಾಗಿದೆ. ಉದ್ದೇಶ ಪೂರ್ವಕವಾಗಿ ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನನ್ನ ಮೊಮ್ಮಗನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ ಎಂದು ರೋಹನ ಎಂಬುವರ ಅಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ತಾಳಿ ಅಡವಿಟ್ಟು ಬಂದ ಹಣದಲ್ಲಿ ಖರೀದಿಸಿದ್ದ ಆಟೋ ಜಖಂ; ಮಹಿಳೆ ಕಣ್ಣೀರು
ಘಟನೆ ಬಗ್ಗೆ ಲಕ್ಷ್ಮೀ ಎಂಬುವರು ಮಾತನಾಡಿ ಹಗಲಿರುಳು ಗಾರ್ಮೇಂಟ್ಸ್ನಲ್ಲಿ ಕೆಲಸ ಮಾಡಿ ಉಳಿಸಿದ ಹಣದಲ್ಲಿ ಮತ್ತು ತಾಳಿ ಅಡವಿಟ್ಟು ಬಂದ ದುಡ್ಡಿನಲ್ಲಿ ಆಟೋ ಖರೀದಿಸಿದ್ದೆ. ಉಪಜೀವನಕ್ಕೆ ಆಟೋ ಆಧಾರವಾಗಿತ್ತು. ಆದರೆ ನಿನ್ನೆಯ ಗಲಾಟೆಯಲ್ಲಿ ಆಟೋ ಸಂಪೂರ್ಣ ಜಖಂ ಆಗಿದೆ. ಇದರಿಂದ ಸಾಕಷ್ಟು ನಷ್ಟವಾಗಿದೆ ಎಂದು ಕಣ್ಣೀರು ಹಾಕಿದರು. ಅಲ್ಲದೆ ಪೋಲಿಸರ ಮೇಲೆ ಕಲ್ಲು ತೂರಾಟ ನಮ್ಮ ಮುಂದೆ ನಡೆದಿದೆ. ಪೋಲಿಸರು ರಕ್ಷಣೆ ಮಾಡಿಕೊಳ್ಳುವುದು ಕಷ್ಟ ಆಗಿತ್ತು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Mon, 2 October 23