ಇದು ಮುಸ್ಲಿಮರ ಹಬ್ಬವಲ್ಲ, ಹಿಂದೂಗಳನ್ನು ಹೆದರಿಸಲು ಮಾಡಿದ ಸಂಚು: ಮಾಜಿ ಸಚಿವ ಈಶ್ವರಪ್ಪ
ನಿನ್ನೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಕುರಿತಾಗಿ ಮಾಜಿ ಸಚಿವ ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಇದು ಮುಸ್ಲಿಮರ ಹಬ್ಬವಲ್ಲ, ಹಿಂದೂಗಳನ್ನು ಹೆದರಿಸಲು ಮಾಡಿದ ಸಂಚು ಎಂದು ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗ, ಅಕ್ಟೋಬರ್ 02: ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆಯುತ್ತೆ ಎಂದು ಪೊಲೀಸರು, ಸರ್ಕಾರಕ್ಕೆ ಗೊತ್ತಿರಲಿಲ್ಲವಾ? ಇದು ಮುಸ್ಲಿಮರ ಹಬ್ಬವಲ್ಲ, ಹಿಂದೂಗಳನ್ನು ಹೆದರಿಸಲು ಮಾಡಿದ ಸಂಚು ಎಂದು ಮಾಜಿ ಸಚಿವ ಈಶ್ವರಪ್ಪ (Eshwarappa) ವಾಗ್ದಾಳಿ ಮಾಡಿದ್ದಾರೆ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಧರಿಸಿಕೊಂಡು ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಲ್ಲೆಯಿಂದ ಪಾರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು
ನಿನ್ನೆ ನಡೆದ ಘಟನೆ ಬಗ್ಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಮೆರವಣಿಗೆ ವೇಳೆ ಕೈಯಲ್ಲಿ ತಲ್ವಾರ್ ಹಿಡಿದು ಪ್ರದರ್ಶಿಸಲಾಗಿದೆ. ಯಾರಿಗೆ ಎಚ್ಚರಿಕೆ ನೀಡಲಾಗುತ್ತಿದೆ? ಹಿಂದೂ ಸಮಾಜದವರಿಗಾ? ತಲ್ವಾರ್ ಹಿಡಿದು ಮೆರವಣಿಗೆ ಮಾಡಿದವರನ್ನ ಇನ್ನೂ ಬಂಧಿಸಿಲ್ಲ.
ಇದನ್ನೂ ಓದಿ: ಧಾರ್ಮಿಕ ಆಚರಣೆಗೆ ಅಡ್ಡಿಯುಂಟು ಮಾಡುವುದನ್ನು ನಮ್ಮ ಸರ್ಕಾರ ಸಹಿಸಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಆದರೆ ಗೃಹ ಸಚಿವರು ಯಾರೂ ತಲ್ವಾರ್ ಹಿಡಿದಿಲ್ಲ ಎಂದಿದ್ದಾರೆ. ಈ ಸರ್ಕಾರದವರು ಮುಸ್ಲಿಂ ಗೂಂಡಾಗಳಿಗೆ ಗುಲಾಮರಾಗಿದ್ದಾರೆ. ಮುಸ್ಲಿಂ ಗೂಂಡಾಗಳಿಗೆ ಹಿಂದೂ ಸಮಾಜ ಹೆದರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪರಮೇಶ್ವರ್ ಒಬ್ಬ ಅಯೋಗ್ಯ ಮಂತ್ರಿ
ಪರಮೇಶ್ವರ್ ಒಬ್ಬ ಅಯೋಗ್ಯ ಮಂತ್ರಿ. ಗೃಹ ಮಂತ್ರಿಯಾಗಲು ಪರಮೇಶ್ವರ್ ಯೋಗ್ಯರಲ್ಲ ಅವರು ಅಯೋಗ್ಯ. ಸರ್ಕಾರ ಸಣ್ಣ ಘಟನೆ ನಡೆದರೂ ಕ್ರಮಕೈಗೊಳ್ಳುತ್ತೇವೆ ಎನ್ನುತ್ತೆ. ಗೃಹ ಸಚಿವರು ಶಿವಮೊಗ್ಗದ ರಾಗಿಗುಡ್ಡಕ್ಕೆ ಬಂದು ನೋಡಲಿ. ಶಿವಮೊಗ್ಗದಲ್ಲಿ ಹಿಂದೂ ಸಮಾಜ ತಿರುಗಿ ಬಿದ್ರೆ ಇವರೆಲ್ಲ ಉಳಿಯುತ್ತಾರಾ ಎಂದು ಹರಿಹಾಯ್ದಿದ್ದಾರೆ.
ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ ಈಶ್ವರಪ್ಪ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಎಸ್.ಈಶ್ವರಪ್ಪ, ಕಲ್ಲು ತೂರಾಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಇದೇ ವೇಳೆ ಗಾಯಾಳು ಪೊಲೀಸರಿದ್ದ ವಾರ್ಡ್ಗೆ ಬಂದ ಈಶ್ವರಪ್ಪ, ಗಾಯಾಳು ಪೊಲೀಸರು ಎಲ್ಲಿ? ಯಾಕೆ ಡಿಸ್ಚಾರ್ಜ್ ಮಾಡಿದ್ದೀರಿ. ಪೊಲೀಸರ ಮೇಲೂ ಹಲ್ಲೆಯಾಗಿದೆ ಅಲ್ವಾ? ಕ್ರಮಕೈಗೊಳ್ಳಬೇಕು ಅಲ್ವಾ. ಯಾವ ಕಾರಣಕ್ಕೆ ಆಸ್ಪತ್ರೆಯಿಂದ ಯಾಕೆ ಡಿಸ್ಚಾರ್ಜ್ ಮಾಡಿಸಿದ್ದೀರಿ ಎಂದು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.