ದಕ್ಷಿಣ ಕನ್ನಡ: ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರಗಳ ದುರ್ಬಳಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ವಿನಯ್ ಗಾಂವ್ಕರ್ ನೀಡಿರುವ ವರದಿ ಆಧರಿಸಿ, ಸಿಐಡಿಯಿಂದ ಡಿಜಿಪಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವರದಿ ದಾಖಲಾಗಿದೆ.
ಮೂರು ಕಾರುಗಳಲ್ಲಿ ಒಂದು ಕಾರನ್ನು ಮಾರಾಟ ಮಾಡಿರುವ ಅರೋಪವೂ ಕೇಳಿ ಬಂದಿದ್ದು, ಸಿಐಡಿಗೆ ಮಂಗಳೂರು ಪೊಲೀಸ್ ಅಧಿಕಾರಿಗಳ ತಂಡ ವರದಿ ಸಲ್ಲಿಸಿದೆ. ಪಿಎಸ್ಸೈ ಕಬ್ಬಾಳ್ ರಾಜ್, ನಾರ್ಕೋಟಿಕ್ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶೀತ್ ಡಿಸೋಜಾ ಮತ್ತು ರಾಜಾ ವಿರುದ್ಧ ವರದಿ ದಾಖಲಾಗಿದ್ದು, ಪೊಲೀಸ್ ಬ್ರೋಕರ್ ದಿವ್ಯದರ್ಶನ್ ವಿರುದ್ಧ ಕೂಡ ವರದಿ ದಾಖಲಾಗಿದೆ.
ಐಷಾರಾಮಿ ಕಾರುಗಳನ್ನು ಬಳಸಿ ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷ ಒಡ್ಡಿ, 30 ಕೋಟಿ ರೂಪಾಯಿ ವಂಚಿಸಿದ್ದ ಎಲಿಯ ಕನ್ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆಯ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿದ್ದ 3 ಐಷಾರಾಮಿ ಕಾರುಗಳನ್ನು ಮಂಗಳೂರು ಸಿಸಿಬಿ ಅಧಿಕಾರಿಗಳು ವಂಚಿಸಿದ್ದಾರಾ? ಎಂಬುದು ಈಗನ ಪ್ರಶ್ನೆ.
ಜಾಗ್ವಾರ್, ಬಿಎಂಡಬ್ಲೂ, ಪೋರ್ಷೆ ಕಾರ್ ವಶ ಪಡಿಸಿಕೊಂಡಿದ್ದ ಅಧಿಕಾರಿಗಳು, ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಜೊತೆಗೆ ಪೋರ್ಷೆ ಹಾಗೂ ಬಿಎಂಡಬ್ಲೂ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್, ನಾಪತ್ತೆಯಾಗಿದ್ದ ಪೋರ್ಷೆ ಹಾಗೂ ಬಿಎಂಡಬ್ಲೂ ಕಾರು ವಶಕ್ಕೆ ಪಡೆದಿದ್ದು, ಜಾಗ್ವಾರ್ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಂಗಳೂರು ಸಿಸಿಬಿ ವಿಭಾಗದಿಂದ ಈಗಾಗಲೇ ವರ್ಗಾವಣೆ ಗೊಂಡಿರುವ ಅಧಿಕಾರಿಗಳಿಂದ ಈ ರೀತಿಯ ವಂಚನೆ ನಡೆದಿದ್ದು, ವಿಚಾರಣೆಗೆ ಒಳಪಡಲಿರುವ ಸಿಸಿಬಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ತಯಾರಿಸಿದ್ದ ಡಿ ಸಿ ಪಿ ವಿನಯ್ ಗಾಂವ್ಕರ್, ಪ್ರಕರಣದ ತನಿಖಾ ವರದಿಯನ್ನು ಡಿಜಿಪಿಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಮೂರು ರೌಡಿ ಗ್ಯಾಂಗ್ಗಳ 11 ಜನರ ಬಂಧನ: ಆಯುಕ್ತ ಕಮಲ್ ಪಂಥ್ ಮಾಹಿತಿ
Published On - 12:04 pm, Fri, 26 February 21