ಬೆಂಗಳೂರು, ಅಕ್ಟೋಬರ್ 17: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಹೆಸರು ಕೇಳಿ ಬರುತ್ತಿದೆ. ಈ ಮಧ್ಯೆ ಡಿಕೆ ಸುರೇಶ್ ಹೆಸರಿನಲ್ಲಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಸುರೇಶ್ ಹೆಸರಿನಲ್ಲಿ ಮಾಜಿ ಶಾಸಕ ಎಂಸಿಅಶ್ವತ್ಥ್ ಚಂಡಿಕಾಯಾಗ ಮಾಡಿಸಿದ್ದಾರೆ. ಗೆಲುವಾಗಲಿ ಎಂದು ಪ್ರಾರ್ಥನೆ ಕೂಡ ಮಾಡಿದ್ದಾರೆ.
ಪದೇ ಪದೇ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಲೇ ಇದ್ದಾರೆ. ಬುಧವಾರವಷ್ಟೇ ಚನ್ನಪಟ್ಟಣ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕೂಡ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಡಿಕೆ ಸುರೇಶ್ ಅವರೇ ಅಭ್ಯರ್ಥಿಯಾಗುತ್ತಾರಾ ಎಂಬ ಪ್ರಶ್ನೆ ಇದೀಗ ಬಲವಾಗಿದೆ.
ಮೊನ್ನೆಯಷ್ಟೇ ರಾಜ್ಯಕ್ಕೆ ಕೆಸಿ ವೇಣುಗೋಪಾಲ್ ಎಂಟ್ರಿ ಕೊಟ್ಟಿದ್ದಾರೆ. ಉಪಚುನಾವಣೆಯ ಬಗ್ಗೆ ಸಿಎಂ, ಡಿಸಿಎಂ ಜೊತೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಮೂರು ಕ್ಷೇತ್ರದಲ್ಲೂ ಗೆಲ್ಲುವ ಬಗ್ಗೆ ಚರ್ಚೆ ಮಾಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿಯ ಗೊಂದಲವನ್ನೇ ಪ್ಲಸ್ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ಆಗಿದೆ. ಹೀಗಾಗಿ ಹೋಬಳಿ ಮಟ್ಟದಲ್ಲಿ ಸಚಿವರನ್ನು ನಿಯೋಜಿಸಲು ಕೆಸಿ ವೇಣುಗೋಪಾಲ್ ಸೂಚನೆ ಕೊಟ್ಟಿದ್ದಾರೆ.
ಚನ್ನಪಟ್ಟಣ ಕಾಂಗ್ರೆಸ್ ಟಿಕೆಟ್ಗೆ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ ಬೇಡಿಕೆ ಇಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆಶಿ, ಕೆಸಿ ವೇಣುಗೋಪಾಲ್ಗೂ ಮನವಿ ಮಾಡಿದ್ದಾರೆ.
ಸಭೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೂರು ಕ್ಷೇತ್ರದ ಚುನಾವಣೆಗೆ ನಾವು ಸಿದ್ಧ ಆಗಿದ್ದೇವೆ. ಅದಕ್ಕಾಗಿ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಅಂದಿದ್ದಾರೆ.
ಚನ್ನಪಟ್ಟಣ ಟಿಕೆಟ್ ನನಗೆ ಸಿಕ್ಕೇ ಸಿಗುತ್ತದೆ. ಜನರ ಮುಂದೆ ಬಂದೇ ಬರುತ್ತೇನೆ ಎಂದು ಬುಧವಾರ ಕಾರ್ಯಕರ್ತರ ಸಭೆಯಲ್ಲೇ ಸಿಪಿ ಯೋಗೇಶ್ವರ್ ಘೋಷಣೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಇದೀಗ ದಳಪತಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಿಪಿ ಯೋಗೇಶ್ವರ್ನ್ನ ಮನವೊಲಿಸಿ ಚುನಾವಣೆ ನಡೆಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಹೆಚ್ಡಿ ಕುಮಾರಸ್ವಾಮಿಗೆ ಆತಂಕ ಶುರುವಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿಯನ್ನೇ ಕಣಕ್ಕಿಳಿಸಬೇಕು ಎಂದು ಕಾರ್ಯಕರ್ತರ ಒತ್ತಡ ಕೂಡ ಇದೆ. ಇದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆಯೂ ಹೆಚ್ಡಿಕೆ ಚರ್ಚೆ ಮಾಡಿದ್ದಾರೆ. ಇದೀಗ ಟಿಕೆಟ್ ಫೈನಲ್ ಸಂಬಂಧ ಇವತ್ತು ಅಥವಾ ನಾಳೆ ಚನ್ನಪಟ್ಟಣ ಕಾರ್ಯಕರ್ತರ ಜೊತೆ ಹೆಚ್ಡಿಕೆ ಮಹತ್ವದ ಸಭೆ ಮಾಡಲಿದ್ದಾರೆ.
ಇನ್ನು ಶಿಗ್ಗಾಂವಿ ಬೈಎಲೆಕ್ಷನ್ ಟಿಕೆಟ್ಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಪುತ್ರನಿಗೆ ಟಿಕೆಟ್ ಕೊಡಿಸಲು ಸಂಸದ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಇನ್ನು ರೇಸ್ನಲ್ಲಿ ಮುರುಗೇಶ್ ನಿರಾಣಿ, ಶ್ರೀಕಾಂತ್ ದುಂಡಿಗೌಡರ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ವರಿಷ್ಠರ ನಿರ್ಧಾರಕ್ಕೆ ಬೊಮ್ಮಾಯಿ ಕಾದು ಕುಳಿತಿದ್ದಾರೆ.
ಟಿಕೆಟ್ ವಿಚಾರವಾಗಿ ವರಿಷ್ಠರ ಜೊತೆ ಚರ್ಚೆ ಮಾಡುವ ಮುನ್ನ ಯಡಿಯೂರಪ್ಪರನ್ನ ಭೇಟಿಯಾಗಿ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ.
ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿದ್ದರೂ, ಶಿಗ್ಗಾಂವಿ ಕ್ಷೇತ್ರದ ಆಕಾಂಕ್ಷಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ ತಂತ್ರ: ಡಿಸಿಎಂ, ಸಿಎಂಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣಗೋಪಾಲ ಖಡಕ್ ಸೂಚನೆ
ಒಟ್ಟಾರೆಯಾಗಿ ಉಪಚುನಾವಣೆ ಗೆಲ್ಲಲು ಮೂರು ರಾಜಕೀಯ ನಾಯಕರು ಸನ್ನದ್ಧವಾಗಿದ್ದಾರೆ. ಗೆಲ್ಲುವ ಸೇನಾನಿಗಳ ಕಣಕ್ಕಿಳಿಸಲು ತೆರೆಮರೆಯಲ್ಲೇ ತಂತ್ರಗಾರಿಕೆ ನಡೆಯುತ್ತಿದೆ. ಆದರೆ, ಹೈವೋಲ್ಟೇಜ್ ಕದನವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಬಗ್ಗೆಯೇ ಭಾರೀ ಚರ್ಚೆ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ