ಬೆಂಗಳೂರು, (ಏಪ್ರಿಲ್ 15): ‘ಈ ಸರ್ಕಾರ ಐದು ಗ್ಯಾರಂಟಿ (guarantee scheme) ಘೋಷಣೆ ಮಾಡಿ, ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ’ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನೇ ಲೋಕಸಭಾ ಚುನಾವಣೆಗೆ ಅಸ್ತ್ರವನ್ನಾಗಿರು ಮಾಡಿಕೊಂಡಿರುವ ಕಾಂಗ್ರೆಸ್, ಎಚ್ಡಿಕೆ ವಿರುದ್ಧ ಪ್ರತಿಭಟನೆಗಿಳಿದಿದೆ. ಈಗಾಗಲೇ ಈ ಸಂಬಂಧ ರಾಜ್ಯ ಮಹಿಳಾ ಆಯೋಗ ಕುಮಾರಸ್ವಾಮಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ಉತ್ತರಿಸುವಂತೆ ನೋಟಿಸ್ ಸಹ ಜಾರಿ ಮಾಡಿದೆ. ಇದೀಗ ಕಾಂಗ್ರೆಸ್ ಮತ್ತೊಂದೆ ಹೆಜ್ಜೆ ಮುಂದೆ ಹೋಗಿ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾಜಿ ಸಂಸದ ಉಗ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಇಂದು(ಏಪ್ರಿಲ್ 15) ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹೇಳಿಕೆಗೆ ಸಮಜಾಯಿಷಿ ನೀಡಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. ಅಲ್ಲದೇ ಕ್ಷಮೆ ಯಾಚಿಸುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: ರಾಜ್ಯ NDA ನಾಯಕರಿಗೆ ಶಾಕ್: ಸಂಜಯ ಪಾಟೀಲ್, ಕುಮಾರಸ್ವಾಮಿಗೆ ನೋಟಿಸ್; ಮಹಿಳಾ ಆಯೋಗ
ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪಡೆ ನಿಗಿನಿಗಿ ಅಂತಿದೆ. ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಆದಿಯಾಗಿ ಸಚಿವರು, ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ. ದಾರಿ ತಪ್ಪಿದ್ದಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಇನ್ನು ಕುಮಾರಸ್ವಾಮಿ ಹೇಳಿಕೆಯನ್ನು ಮಹಿಳಾ ಆಯೋಗ ಖಂಡಿಸಿದೆ. ಅಲ್ಲದೇ ಈ ಸಂಬಂಧ ಕುಮಾರಸ್ವಾಮಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇದೀಗ ನೋಟಿಸ್ ಸಹ ಜಾರಿ ಮಾಡಿದೆ.
ಕುಮಾರಸ್ವಾಮಿ ಏನೇ ಹೇಳಿದ್ರು, ಕಾಂಗ್ರೆಸ್ ಪಾಲಿಗಂತು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಪ್ರತಿಭಟನೆಗೆ ಕರೆ ನೀಡಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಹೀಗಾಗಿ ದಾರಿ ತಪ್ಪಿದ ದಂಗಲ್ ಇನ್ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡಬೇಕಿದೆ.
ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಕುಮಾರಸ್ವಾಮಿ ವಿರುದ್ಧ ಮಗಿಬಿದ್ದಿದೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ಸಹ ಕಾಂಗ್ರೆಸ್ನವರು ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಹೇಮಮಾಲಿನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಜೆಡಿಎಸ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 pm, Mon, 15 April 24