ಮುಜರಾಯಿ ದೇಗುಲ ಅರ್ಚಕರಿಗೆ ಬಿಡುಗಡೆಯಾಗದ ತಸ್ತೀಕ್: ಕಾಂಗ್ರೆಸ್ ಆಕ್ರೋಶ
ಅರ್ಚಕರ ಬಗ್ಗೆ ಸರ್ಕಾರ ಏಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಸಭೆಯಲ್ಲಿ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.
ಬೆಂಗಳೂರು: ರಾಜ್ಯದ ವಿವಿಧೆಡೆಯಿರುವ ಮುಜರಾಯಿ ಇಲಾಖೆಗಳಿಗೆ ಸೇರಿದ ದೇಗುಲಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರಿಗೆ ತಸ್ತೀಕ್ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸರ್ಕಾರ ಏಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಸಭೆಯಲ್ಲಿ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.
ಪ್ರತಿಪಕ್ಷದ ಪ್ರಶ್ನೆಗೆ ಉತ್ತರಿಸಿದ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ದಾಖಲೆ ಸಂಗ್ರಹ ಮತ್ತು ಪರಿಶೀಲನೆ ಕೆಲಸ ನಡೆಯುತ್ತಿದೆ ಎಂದರು. ‘ಸರ್ಕಾರ ಬಂದು ಮೂರು ವರ್ಷವಾದರೂ ದಾಖಲೆ ಸಂಗ್ರಹಿಸಿಲ್ಲವೇ’ ಎಂದು ಆಕ್ಷೇಪಿಸಿದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಶೀಘ್ರ ತಸ್ತೀಕ್ ಹಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ನನ್ನ ತಂದೆ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಸ್ತೀಕ್ ನೀಡುವ ಪದ್ಧತಿ ಆರಂಭವಾಗಿತ್ತು. ಸಿದ್ದರಾಮಯ್ಯ ತಸ್ತೀಕ್ ಮೊತ್ತ ಹೆಚ್ಚಿಸಿದ್ದರು. ಆದರೆ ಕಳೆದ 5 ವರ್ಷಗಳಿಂದ ತಸ್ತೀಕ್ ಹಣವನ್ನು ಹೆಚ್ಚಿಸಿಲ್ಲ ಎಂದು ದೂರಿದರು.
ತಸ್ತೀಕ್ ಹೆಚ್ಚಳದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಮೋದಿ ಕುರಿತು ಸಿದ್ದರಾಮಯ್ಯ ಹೇಳಿಕೆ: ಸದನದಲ್ಲಿ ಗದ್ದಲ ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬಗ್ಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದವೂ ನಡೆಯಿತು. ಬಳಿಕ ವಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸಿದ್ದರಾಮಯ್ಯ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲು ಸ್ಪೀಕರ್ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪರಿಂದ ಸೂಚನೆ ನೀಡಿದರು.
ಇದನ್ನೂ ಓದಿ: ರೈತ ಚಳವಳಿ ಸ್ಪಾನ್ಸರ್ಡ್: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರೈತರ ಹೋರಾಟ
(Congress Demands Immediate Release of Tastik Amount to Priest of Muzrai Temples)