ನಿಗಮ ಮಂಡಳಿ ನೇಮಕಾತಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್: ಪಟ್ಟಿ ತಯಾರಿಸಲು ಖರ್ಗೆ ಸೂಚನೆ
ಮುಖ್ಯವಾಗಿ ಪಕ್ಷ ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರು ಹಾಗೂ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದೇ ಇದ್ದರೂ ಪಕ್ಷದಲ್ಲಿದ್ದು ಕೆಲಸ ಮಾಡಿದವರಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಆದ್ಯತೆ ನೀಡಲು ಸೂಚನೆ ನೀಡಿದ್ದು, ಒಟ್ಟು 45 ರಿದ 50 ಮಂದಿಯನ್ನು ನಿಗಮ ಮಂಡಳಿಗೆ ನೇಮಕ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಬೆನ್ನಲ್ಲೇ ಕಾಂಗ್ರೆಸ್ (Congress) ಹೈಕಮಾಂಡ್ಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ನಿಗಮ ಮಂಡಳಿ ನೇಮಕಾತಿಗೆ ಸೋಮವಾರ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇಂದು (ಅಕ್ಟೋಬರ್ 16) ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನಿಗಮ ಮಂಡಳಿ ನೇಮಕಕ್ಕೆ ಅನುಮತಿ ನೀಡಿದ್ದಾರೆ. ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಯಾರನ್ನ ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂಬ ಗೊಂದಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ತು ಎಂದಿದ್ದಾರೆ. ಅಲ್ಲದೇ ಶಾಸಕರು, ಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರನ್ನೊಳಗೊಂಡ ಪಟ್ಟಿ ತಯಾರಿಸುವಂತೆ ಸೂಚಿಸಿದ್ದಾರೆ.
ಮುಖ್ಯವಾಗಿ ಪಕ್ಷ ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರು ಹಾಗೂ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದೇ ಇದ್ದರೂ ಪಕ್ಷದಲ್ಲಿದ್ದು ಕೆಲಸ ಮಾಡಿದವರಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಆದ್ಯತೆ ನೀಡಲು ಸೂಚನೆ ನೀಡಿದ್ದು, ಒಟ್ಟು 45 ರಿದ 50 ಮಂದಿಯನ್ನು ನಿಗಮ ಮಂಡಳಿಗೆ ನೇಮಕ ಮಾಡುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ತಿಂಗಳ ಅಂತ್ಯಕ್ಕೆ ಅಥವಾ ಮುಂದಿನ ತಿಂಗಳು ಮೊದಲ ವಾರದಲ್ಲಿ ನಿಗಮ ಮಂಡಳಿ ನೇಮಕವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ನೇಮಕದ ಕೂಗು; ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಆಗ್ರಹ
ನಿಗಮ ಮಂಡಳಿಗೆ ಶಾಸಕರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ನ ಒಂದು ಬಣ ಆಗ್ರಹಿಸಿದ್ದರೆ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ನೇಮಿಸಬೇಕು ಎಂದು ಮೊತ್ತೊಂದು ಬಣ ಪಟ್ಟು ಹಿಡಿದಿತ್ತು. ಶಾಸಕರನ್ನು ದಯವಿಟ್ಟು ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಡಿ ಎಂದು ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಪ್ರಚಾರ ಸಮಿತಿ ಮುಖಂಡರು ಆಗ್ರಹಿಸಿದ್ದರು. ಈ ಮಧ್ಯೆ, ನಿಗಮ ಮಂಡಳಿಗೆ ನೇಮಕಾತಿ ವೇಳೆ ಶಾಸಕರಿಗೆ ಮೊದಲ ಪ್ರಾಶಸ್ತ್ಯ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಬಳಿಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪ್ರಾಶಸ್ತ್ಯ ಎಂಬ ಮಾತುಗಳೂ ಕೇಳಿಬಂದಿವೆ. ಅಂತಿಮವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ನಿಗಮ ಮಂಡಳಿಗೆ ಯಾರನ್ನು ನೇಮಕ ಮಾಡುತ್ತಾರೆ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ ದೊರೆಯುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ