ಬೆಂಗಳೂರು, ಮೇ 23: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡು ಹಂತದ ಮತದಾನವೂ ಮುಗಿದಿದೆ. ಈಗ ವಿಧಾನಪರಿಷತ್ ಚುನಾವಣೆಯೂ (MLC Election) ಹತ್ತಿರವಾಗುತ್ತಿದೆ. ಇನ್ನು ಹತ್ತೇ ದಿನದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಹೀಗಾಗಿ, ಭೋಜನಕೂಟದ ನೆಪದಲ್ಲಿ ಬುಧವಾರ ರಾತ್ರಿ ಸಚಿವರೆಲ್ಲಾ ಸದಾಶಿವನಗರದಲ್ಲಿರುವ ಸಂಸದ ಡಿಕೆ ಸುರೇಶ್ (DK Suresh) ನಿವಾಸದಲ್ಲಿ ಒಟ್ಟಿಗೆ ಸೇರಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಔತಣಕೂಟ ಏರ್ಪಡಿಸಿದ್ದರು.
ಸಿಎಂ ಸಿದ್ದರಾಮಯ್ಯ, ಸಚಿವರಾದ ಭೈರತಿ ಸುರೇಶ್, ಚಲುವರಾಯಸ್ವಾಮಿ, ಹೆಚ್.ಕೆ.ಪಾಟೀಲ್, ಸಂತೋಷ್ ಲಾಡ್, ಕೆ.ಹೆಚ್.ಮುನಿಯಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ ತಂಗಡಗಿ, ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಭಾಗಿಯಾಗಿದರು. ಈ ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಬಿಜೆಪಿ-ಜೆಡಿಎಸ್‌ನ ಆರೋಪಗಳಿಗೆ ಖಡಕ್ ತಿರುಗೇಟು ನೀಡುವಂತೆ ಸಭೆಯಲ್ಲಿ ಸಿಎಂ ಸೂಚನೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರ ತಲೆದಂಡದ ಬಗ್ಗೆ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆ ನಡೆದಿದೆ. ಜೊತೆಗೆ ಒಂದು ವರ್ಷದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದವರಿಗೆ ಮಂತ್ರಿಗಿರಿ ತ್ಯಾಗಕ್ಕೂ ಸಿದ್ಧರಿರುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸಕ್ರಿಯರಾಗಿ ಇರುವ ನಾಯಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ. ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ಹೈಕಮಾಂಡೇ ಮೌಲ್ಯಮಾಪನ ಮಾಡುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಇಷ್ಟೇ ಅಲ್ಲ ಇನ್ನೂ ಹಲವು ವಿಚಾರಗಳ ಬಗ್ಗೆ ಡಿನ್ನರ್ ಮೀಟಿಂಗ್‌ನಲ್ಲಿ ಪ್ರಸ್ತಾಪವಾಗಿದೆ.
ಡಿಸಿಎಂ ಡಿನ್ನರ್ ಮೀಟಿಂಗ್‌ನಲ್ಲಿ ಲೋಕಸಭೆ ಚುನಾವಣೆಯ ಆಗು-ಹೋಗುಗಳ ಬಗ್ಗೆ ಚರ್ಚೆಯಾಗಿದೆ. ಗ್ಯಾರಂಟಿಗಳು ಕೈಹಿಡಿದ್ದರೆ 14ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದೆಂಬ ವಿಶ್ವಾಸವನ್ನ ಸಿಎಂ ಮತ್ತು ಡಿಸಿಎಂ ಬಳಿ ಹಿರಿಯ ಸಚಿವರು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಸಚಿವರ ವರದಿ ನೀಡಿದ್ದು, ತಮಗೆ ಜವಾಬ್ದಾರಿ ನೀಡಿದ ಕ್ಷೇತ್ರಗಳ ಫಲಿತಾಂಶದ ಬಗ್ಗೆಯೂ ಸಮಾಲೋಚನೆ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಗೆಲ್ಲಬಹುದು, ಎಷ್ಟು ಕ್ಷೇತ್ರಗಳಲ್ಲಿ ಹಿನ್ನಡೆ ಆಗಬಹುದು? ಹಿನ್ನಡೆ ಎಲ್ಲಿ ಆಗಲಿದೆ? ಹಿನ್ನಡೆ ಆದರೆ ಕಾರಣ ಏನು ಎಂಬ ಚರ್ಚೆ ಆಗಿದೆ. ಇದರ ಜೊತೆಗೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡದವರ ಬಗ್ಗೆಯೂ ಸಿಎಂಗೆ ಸಚಿವರು ಹೇಳಿದ್ದಾರೆ. ಇನ್ನು, ಸಚಿವರ ಕುಟುಂಬದಿಂದ ನಿಂತ ಅಭ್ಯರ್ಥಿಗಳ ಬಗ್ಗೆಯೂ ಗೆಲುವು-ಸೋಲಿನ ಚರ್ಚೆ ಆಗಿದೆ. ಅಭ್ಯರ್ಥಿಗಳ ಸೋಲಾದ್ರೆ ಏನಾಗಲಿದೆ ಎಂಬ ಬಗ್ಗೆ ಅಭಿಪ್ರಾಯವನ್ನ ಸಿಎಂ, ಡಿಸಿಎಂ ಸಂಗ್ರಹಿಸಿದ್ದಾರೆ.
ಹೆಚ್ಚು ಮಳೆ ಬರಲಿ, ತಮಿಳುನಾಡಿಗೂ ನೀರು ಹರಿಯಲಿ: ಡಿಸಿಎಂ ಡಿಕೆ ಶಿವಕುಮಾರ್
ಇದರ ಜೊತೆಗೆ ವಿಧಾನ ಪರಿಷತ್ ಚುನಾವಣೆಯನ್ನು ಲೋಕಸಭೆ ಚುನಾವಣೆ ರೀತಿ ಎದುರಿಸುವಂತೆ ಸಿಎಂ ಹೇಳಿದ್ದಾರಂತೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ರೆ ಅದೇ ಅಲೆಯಲ್ಲೇ ಬಿಬಿಎಂಪಿ ಚುನಾವಣೆ ನಡೆಸೋ ಮಹತ್ವದ ವಿಚಾರವೂ ಚರ್ಚೆಗೆ ಬಂದಿದೆ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ