ಚಿಕ್ಕಬಳ್ಳಾಪುರ, ಡಿಸೆಂಬರ್ 6: ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ. ಸಚಿವ ಸ್ಥಾನ ಕೇಳಲು ನನಗೆ ಹಕ್ಕಿದೆ. ನನಗೆ ಸಚಿವ ಸ್ಥಾನ ಬೇಕು. ಅಪರೇಷನ್ ಕಮಲದಲ್ಲಿ ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯಿಂದ ಇದ್ದೆ. ಮುಂದೆ ಸಚಿವ ಸಂಪುಟ ಪುನರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದಾರೆ.
ನಾನು ಹಿರಿಯ ಶಾಸಕ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನನಗೆ ಸಂಪುಟದಲ್ಲಿ ಸ್ಥಾನ ಕೊಡುವ ಭರವಸೆ ಇದೆ. ನಾನು ಎರಡು ಬಾರಿ ನಿಗಮ ಮಂಡಳಿ ತಿರಸ್ಕಾರ ಮಾಡಿದ್ದೇನೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ ಕ್ಷೇತ್ರದ ಎಲ್ಲರೂ ಸಚಿವರಾಗಿದ್ದಾರೆ. ಬಾಗೇಪಲ್ಲಿ ಯಿಂದ ಇದುವರೆಗೂ ಯಾರೂ ಕೂಡ ಸಚಿವರಾಗಿಲ್ಲ. ಹಾಗಾಗಿ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದರು. ಆದರೆ ಸದ್ಯಕ್ಕೆ ಸಂಪುಟ ಪುನಾರಚನೆ ಬೇಡವೆಂದು ಹೈಕಮಾಂಡ್ ನಾಯಕರು ತಿಳಿಸಿದ್ದರು. ಅದಾಗಿಯೂ ರಾಜ್ಯದಲ್ಲಿ ಕೆಲವು ಮಂದಿ ಕಾಂಗ್ರೆಸ್ ನಾಯಕರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗಳು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಸುಬ್ಬಾರೆಡ್ಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಸಚಿವರಿಗೆ ‘ಸಪ್ತ’ ಸಂಕಟ, ಸಚಿವಾಕಾಂಕ್ಷಿಗಳಿಗೂ ನಿರಾಸೆ: ಏನಿದು ಹೈಕಮಾಂಡ್‌ನ ಅಚ್ಚರಿ ನಡೆ?
ಅಧಿಕಾರ ಹಂಚಿಕೆ ಕುರಿತಾದ ಹೇಳಿಕೆ ಪ್ರತಿ ಹೇಳಿಕೆಗಳ ನಡುವೆ, ಇದೀಗ ಸಚಿವ ಸ್ಥಾನದ ಕೂಗು ಕೂಡ ಕೇಳಿಬಂದಿರೋದು ಪಕ್ಷದ ಅಂತರಿಕ ಸಂಘರ್ಷವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ