ಬೆಂಗಳೂರು, ಜೂನ್ 11: ಐದು ಗ್ಯಾರಂಟಿಗಳ (Guarantee Schemes) ಭರವಸೆಯಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಗೆ (Congress) ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಲಭಿಸಿಲ್ಲ. ಗ್ಯಾರಂಟಿಗಳ ಬಗ್ಗೆ ಇಷ್ಟು ದಿನ ವಿಪಕ್ಷಗಳು ಟೀಕೆ ಮಾಡುತ್ತಿದ್ದವು. ಆದರೆ, ಈಗ ಸ್ವಪಕ್ಷದ ಶಾಸಕರಿಂದಲೇ ಗ್ಯಾರಂಟಿಗಳ ವಿಚಾರವಾಗಿ ಅಪಸ್ವರ ಎದ್ದಿದೆ.
ರಾಜ್ಯದಲ್ಲಿ ಎಲ್ಲಾ ವರ್ಗದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ವಿಧಾನಸಭೆ ಚುನಾವಣೆಯ ರೀತಿಯಲ್ಲೇ ಲೋಕಸಭೆಯಲ್ಲೂ ಜನ ಹೆಚ್ಚಿನ ಬಹುಮತ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ. ರಾಜ್ಯದಲ್ಲಿ ಡಬಲ್ ಡಿಜಿಟ್ ಬರುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ಗೆ 9 ಸ್ಥಾನ ಮಾತ್ರ ಲಭಿಸಿದೆ. ಹೀಗಾಗಿ ಗ್ಯಾರಂಟಿಗಳನ್ನು ಕೊಟ್ಟರೂ ಉಪಯೋಗವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಇಷ್ಟ ಆಗಿಲ್ಲ. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಅಂತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಚುನಾವಣೆಯಲ್ಲಿ ಗ್ಯಾರಂಟಿಗಳ ಬಗ್ಗೆ ನಿರೀಕ್ಷೆ ಇತ್ತು. ಆದರೆ ಒಂದೊಂದು ಕ್ಷೇತ್ರಕ್ಕೆ ಒಂದೊಂದು ಲೆಕ್ಕಾಚಾರ ಇರುತ್ತದೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ರಾಜಕೀಯಕ್ಕೋಸ್ಕರ ಗ್ಯಾರಂಟಿಗಳ ಜಾರಿ ಮಾಡಿಲ್ಲ. ಗ್ಯಾರಂಟಿಗಳಿಂದ ಲಾಭ, ನಷ್ಟ ಅನ್ನೋದಿಲ್ಲ. ಸ್ವಾರ್ಥ ಬಿಟ್ಟು ಜನರಿಗೆ ನಾವು ಕೊಟ್ಟಿರೋದು ಅವುಗಳನ್ನು. ಅದರಿಂದ ನಷ್ಟ ಲಾಭ ಅಂತ ಲೆಕ್ಕ ಹಾಕಲು ಬರಲ್ಲ. ಸೋಲಾಯಿತು ಅಂತ ಹಿಂದೆ ತೆಗೆದುಕೊಳ್ಳುವುದು ತಪ್ಪು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಬಿಜೆಪಿ ಲೇವಡಿ ಮಾಡಿದೆ. ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಐದು ಗ್ಯಾರಂಟಿಗೆ ಇನ್ನೂ ಐದು ಸೇರಿಸಿ. ಎರಡು ಸಾವಿರ ಕೊಡುವ ಬದಲು ಐದು ಸಾವಿರ ನೀಡಿ. ಹೆಣ್ಣು ಮಕ್ಕಳಿಗೆ ಮಾತ್ರ ಬಸ್ ಫ್ರೀ ಇದೆ, ಪುರುಷರಿಗೂ ಫ್ರೀ ನೀಡಿ. ಬಿಎಂಟಿಸಿ ಈಗಾಗಲೇ ಬರ್ ಬಾದ್ ಆಗಿದೆ. ಗ್ಯಾರಂಟಿಯನ್ನು ಇವರು ಹೃದಯದಿಂದ ಮಾಡಿಲ್ಲ, ವೋಟ್ಗಾಗಿ ಮಾಡಿದ್ದರು. ಈಗ ಶಾಸಕರೆಲ್ಲಾ ಕತ್ತಿನ ಪಟ್ಟಿ ಹಿಡಿದು ಹಣ ನೀಡಿ ಎಂದು ಕೇಳುತ್ತಿದ್ದಾರೆ ಅಂತ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕುಟುಕಿದ್ದಾರೆ.
ಸ್ವಪಕ್ಷದ ಶಾಸಕರಿಂದಲೇ ಗ್ಯಾರಂಟಿ ಯೋಜನೆ ನಿಲ್ಲಿಸುವುದು ಸೂಕ್ತ ಎಂಬ ಹೇಳಿಕೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ 5 ಯೋಜನೆಗಳನ್ನ ನಿಲ್ಲಿಸುವುದಿಲ್ಲ. ನಾವು ರಾಜಕೀಯಕ್ಕೋಸ್ಕರ ಈ ಯೋಜನೆಗಳನ್ನು ಜಾರಿ ಮಾಡಿಲ್ಲ. ಚುನಾವಣೆಯಲ್ಲಿ ಮತ ಪಡೆಯುವುದಕ್ಕೋಸ್ಕರ ನಾವು ಯೋಜನೆಗಳನ್ನ ಕೊಟ್ಟಿಲ್ಲ. ಜನರ ಬದುಕಿಗಾಗಿ ನಾವು ಕಾರ್ಯಕ್ರಮಗಳನ್ನ ಕೊಟ್ಟಿದ್ದೀವಿ. ಇಂದಿರಾಗಾಂಧಿ ಕಾಲದಿಂದಲೂ ಅನೇಕ ಯೋಜನೆಗಳನ್ನ ಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಜನಪರ ಕಾರ್ಯಕ್ರಮಗಳನ್ನ ಕೊಟ್ಟಿಲ್ಲ. ಜಾತಿ-ಧರ್ಮದ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತೆ. ಯಡಿಯೂರಪ್ಪ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಎದೆಗೆ ಗುಂಡು ಹೊಡೆದಿದ್ದರು. ಬಿಜೆಪಿ ಭಾವನಾತ್ಮಕ ವಿಚಾರದ ಮೇಲೆ ರಾಜಕೀಯ ಮಾಡುತ್ತದೆ. ಜಾತಿ ಜಾತಿ ನಡುವೆ ಬೆಂಕಿ ಹಚ್ಚುವ ಕೆಲವ ಬಿಜೆಪಿಯವರದ್ದು. ಹಿಂದೆ 165 ಭರವಸೆಗಳನ್ನ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ನಮ್ಮ ಗ್ಯಾರೆಂಟಿಗಳಿಂದಲೇ ವಿಧಾನಸಭೆಯಲ್ಲಿ 136 ಸೀಟ್ ಬಂದಿದೆ. ಸಿಎಂ-ಡಿಸಿಎಂ ಬಳಿ ಚರ್ಚೆ ಮಾಡಿ ಸಣ್ಣಪುಟ್ಟ ಬದಲಾವಣೆಗಳನ್ನ ಮಾತ್ರ ಮಾಡುವುದುದಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ಮುಂದಾದ ಸರ್ಕಾರ: 5 ಭಾಗಗಳಾಗಿ ವಿಂಗಡಿಸಲು ತೀರ್ಮಾನ
ಲೋಕಸಭೆಯಲ್ಲಿ ಗ್ಯಾರಂಟಿ ಕೈಹಿಡಿಯಬಹುದು ಎಂಬ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ಕನಸು ಹುಸಿಯಾಗಿದೆ. ಅತ್ತ ಬಿಜೆಬಿಗರಿಗಿಂತ ಸ್ವಪಕ್ಷೀಯರಿಂದಲೇ ಗ್ಯಾರಂಟಿ ವಿಚಾರವಾಗಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ