
ಬೆಂಗಳೂರು, ಅಕ್ಟೋಬರ್ 2: ಕಾಂಗ್ರೆಸ್ (Congress) ಕುರ್ಚಿ ಅದಲುಬದಲು ಆಟದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಮುಗಿದು, ಅಕ್ಟೋಬರ್ ಬಂದಿದೆ. ಈಗ ನವೆಂಬರ್ ಕ್ರಾಂತಿ ಎಂಬ ಚರ್ಚೆ ಶುರುವಾಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಎರಡೂವರೆ ವರ್ಷ ನಾನೇ ಸಿಎಂ ಆಗಿ ಇದ್ದೆ. ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ ಎನ್ನಲು ಕಾರಣವಿದೆ.
ನವೆಂಬರ್ ಕ್ರಾಂತಿ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲ ಈ ಬಾರಿ ನೀವೇ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೀರಿ. ಮುಂದಿನ ವರ್ಷ ಪುಷ್ಪಾರ್ಚನೆ ಮಾಡುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಐ ಹೋಪ್ ಸೋ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.
ಅಷ್ಟಕ್ಕೂ ಸಿಎಂ ಈ ರೀತಿ ಮಾತನಾಡುವುದಕ್ಕೂ ಕಾರಣವಿದೆ. ಮಾಜಿ ಸಂಸದ ಶಿವರಾಮೇಗೌಡ ಬುಧವಾರ ಮಾತನಾಡಿ, ಡಿಕೆ ಶಿವಕುಮಾರ್ ನವೆಂಬರ್ನಲ್ಲಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಕುಣಿಗಲ್ ಕಾಂಗ್ರೆಸ್ ಶಾಸಕ ಹೆಚ್.ಡಿ ರಂಗನಾಥ್ ಕೂಡಾ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದು, ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು ಎಂದಿದ್ದಾರೆ.
ಶಿವರಾಮೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ವ್ಯಯಕ್ತಿಕ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಸಿಎಂ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಕ್ಕರ್
ಆದರೆ, ಬಿಜೆಪಿ ನಾಯಕರು ಮಾತ್ರ, ‘ಕಾಂಗ್ರೆಸ್ ಸಿಎಂ ಕುರ್ಚಿಯ ಜಗಳ ಬೀದಿಗೆ ಬಂದಿದೆ. ನವೆಂಬರ್ ಕ್ರಾಂತಿ ಶತಸಿದ್ಧ’ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ, ಬಿಜೆಪಿಯವರು ಭವಿಷ್ಯಕಾರರಲ್ಲ ಅಂತಾ ಗುಡುಗಿದ್ದಾರೆ. ಒಟ್ಟಿನಲ್ಲಿ ನವೆಂಬರ್ ಕ್ರಾಂತಿಯ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ನೊಳಗಿದ್ದವರೇ ಸಿಎಂ ಕುರ್ಚಿ ಬದಲಾವಣೆ ಸುಳಿವು ಕೊಡುತ್ತಿರುವುದು ಕುತೂಹಲ ಕೆರಳಿಸಿದೆ.
Published On - 6:44 am, Thu, 2 October 25