ಕೋಲಾರ: ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಇನ್ನು ಗ್ರಾಮ ಪಂಚಾಯತಿ ಚುನಾವಣೆ ಸದ್ದು ಮಾಡುತ್ತಲೇ ಇದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಬೃಹತ್ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದ ಬಳಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಿರಿಯಾನಿ ತಿನ್ನಲು ತಳ್ಳಾಟ ನೂಕಾಟ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ಊಟಕ್ಕಾಗಿ ಬಿರಿಯಾನಿಯನ್ನು ಮಾಡಿಸಲಾಗಿತ್ತು. ಈ ವೇಳೆ ಬಿರಿಯಾನಿ ತಿನ್ನಲು ನಾ ಮುಂದು ತಾ ಮಂದು ಎಂದು ಜನರು ಬಿರಿಯಾನಿಗಾಗಿ ಮುಗಿಬಿದ್ದರು.
ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ನೂತನ ಗ್ರಾಮ ಪಂಚಾಯತಿ ಸದಸ್ಯರಿಗಾಗಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಕೆಜಿ ಚಿಕನ್ ಮತ್ತು 500 ಕೆಜಿ ಬಿರಿಯಾನಿಯನ್ನು ಮಾಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಿರಿಯಾನಿ ತಿನ್ನಲು ತಟ್ಟೆಗಳನ್ನು ಹಿಡಿದು ನಾ ಮುಂದು ತಾ ಮುಂದೆ ಎಂದು ಕಿತ್ತಾಟ ಶುರುವಾಯಿತು.
ಸುಡುವ ಬಿಸಿಲಿನ ನಡುವೆಯೂ ಬಿಸಿ ಬಿಸಿ ಬಿರಿಯಾನಿ ತಿಂದ ಕಾರ್ಯಕರ್ತರು ಮುಂದಿನ ಚುನಾವಣೆಗೆ ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಇನ್ನು ಸಮಾವೇಶಕ್ಕಾಗಿ ದೊಡ್ಡಕಾರಿ ಬಳಿ ಬೃಹತ್ ವೇದಿಕೆಯನ್ನು ಹಾಕಲಾಗಿತ್ತು, ಕಾರ್ಯಕ್ರಮದಲ್ಲಿ ಶಾಸಕಿ ರೂಪಾ ಶಶಿಧರ್, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿ ಸಂಸದ ಕೆ.ಹೆಚ್. ಮುನಿಯಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಜನ ವಿರೋಧಿ ಸರ್ಕಾರ ಹಾಗೂ ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದೆ. ಸಂಘ ಪರಿವಾರದವರೇ ಈ ಸರ್ಕಾರವನ್ನು ಬೀಳಿಸುವ ದಿನಗಳು ದೂರವಿಲ್ಲ ಎಂದರು. ಇನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವೇದಿಕೆಯಲ್ಲಿದ್ದ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ
ಕಾಂಗ್ರೆಸ್‌ನಲ್ಲಿ ಮಾತ್ರ ಮಹಾನ್ ನಾಯಕರಿದ್ದಾರಾ ಬಿಜಿಪಿಯಲ್ಲಿಲ್ವಾ? ಸಿದ್ದರಾಮಯ್ಯ ಟಾಂಗ್
ಬಿಜೆಪಿ ನಾಯಕರಿಗೂ ಈ ಆರೋಪಿಗಳಿಗೂ ಏನು ಸಂಬಂಧ? ಟ್ವಿಟರ್ ಸಮರದಲ್ಲಿ ಕಾಂಗ್ರೆಸ್ ಪ್ರಶ್ನೆ
Published On - 5:29 pm, Thu, 18 March 21