ನಿಮ್ಮ ಸರ್ಕಾರದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ: ಕಾಂಗ್ರೆಸ್ ವಿರುದ್ಧ ಮತ್ತೆ ಗುತ್ತಿಗೆದಾರರ ಆಕ್ರೋಶ

ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ಗೆ ಆಪ್ತರಾಗಿದ್ದ ರಾಜ್ಯ ಗುತ್ತಿಗೆದಾರರು ಈಗ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಮಿಷನ್ ದುಪ್ಪಟ್ಟಾಗಿದೆ, 33 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಗುತ್ತಿಗೆದಾರರ ಸಂಘ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ. ಸಮಸ್ಯೆಗಳಿಗೆ ಸ್ಪಂದಿಸದಿರುವ ಈ ಸರ್ಕಾರದಿಂದ ತಮಗೆ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸರ್ಕಾರದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ: ಕಾಂಗ್ರೆಸ್ ವಿರುದ್ಧ ಮತ್ತೆ ಗುತ್ತಿಗೆದಾರರ ಆಕ್ರೋಶ
ಮತ್ತೆ ಗುಡುಗಿದ ಗುತ್ತಿಗೆದಾರರು
Updated By: Ganapathi Sharma

Updated on: Sep 30, 2025 | 9:20 AM

ಬೆಂಗಳೂರು, ಸೆಪ್ಟೆಂಬರ್ 30: ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷದ ಪಾಲಿಗೆ ದೇವರಂತೆ ಭಾಸವಾಗಿದ್ದ ಕರ್ನಾಟಕ ರಾಜ್ಯದ ಗುತ್ತಿಗೆದಾರರು ಇದೀಗ ಕಾಂಗ್ರೆಸ್ ಸರ್ಕಾರದ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಮಾತುಗಳಿಗೆಲ್ಲ ತಾನೇ ಮುದ್ರೆ ಒತ್ತಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಏರಿದ ಬಳಿಕ ಅದೇ ಗುತ್ತಿಗೆದಾರರ ಮಾತುಗಳಿಗೆ ಕಿವಿಯೇ ಕೊಡುತ್ತಿಲ್ಲ. ಹೀಗಂದು ಖುದ್ದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಗುತ್ತಿಗೆ ಕಮಿಷನ್ ದುಪ್ಪಟ್ಟಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ (Karnataka State Contractors Association) ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿದ್ದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್, ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

33 ಸಾವಿರ ಕೋಟಿ ಬಾಕಿಉಳಿಸಿಕೊಂಡಿರುವ ಸರ್ಕಾರ

ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಕಳೆದ ಎರಡೂವರೆ ವರ್ಷಗಳಿಂದ ನಿರಂತರ ಸಭೆಗಳಾಗಿವೆ. ಎರಡು ವರ್ಷಗಳಿಂದ ಸಮಸ್ಯೆ ಹಾಗೂ ಬಾಕಿ ಹಣದ ಪಾವತಿ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಆದರೆ ಪ್ರತಿ ಬಾರಿ ಗುತ್ತಿಗೆದಾರರನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಮಾಧಾನಪಡಿಸಿ ವಾಪಸ್ ಕಳುಹಿಸುವುದನ್ನು ಬಿಟ್ಟರೆ ಬೇರೆ ಪ್ರಯೋಜನವೇ ಆಗುತ್ತಿಲ್ಲ. ಹೀಗೆಂದು ಪತ್ರದಲ್ಲಿ ಉಲ್ಲೇಖ ಮಾಡಿರುವ ಗುತ್ತಿಗೆದಾರರು, ಇದುವರೆಗೆ ನಿಮ್ಮ ಸರ್ಕಾರದಿಂದ ಯಾವುದೇ ಪ್ರಯೋಜನ ನಮಗೆ ಆಗಿಲ್ಲ ಎಂದು ಕೆಂಡ ಕಾರಿದ್ದಾರೆ.

ಗುತ್ತಿಗೆದಾರರು ಸಿಎಂಗೆ ಬರೆದಿರುವ ಪತ್ರದಲ್ಲಿರುವ ಅಂಶಗಳೇನು?

  • ಹಿಂದಿನ ಸರ್ಕಾರಕ್ಕಿಂತ ಈಗ ಕಮಿಷನ್ ದುಪ್ಪಟ್ಟು ಆಗಿರುತ್ತದೆ.
  • ಕಾಮಗಾರಿಗಳ ಕೈಗೊಳ್ಳುವ 8 ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಆಗಿಲ್ಲ.
    ಸಂಬಂಧಿಸಿದ ಎಲ್ಲಾ ಇಲಾಖಾ ಸಚಿವರು, ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ.
  • ಜ್ಯೇಷ್ಠತೆ, ಪಾರದರ್ಶಕತೆ ಕಾಯ್ದೆ ಕಾಪಾಡಿಲ್ಲ.
  • ಅವರದ್ದೇ ಫಾರ್ಮುಲಾಗಳನ್ನ ತಯಾರಿಸಿಕೊಂಡು ಸ್ಪೆಷಲ್ ಎಓಸಿ ರೂಪದಲ್ಲಿ ಬಾಕಿ ಹಣ 3 ತಿಂಗಳಿಗೊಮ್ಮೆ 15%-20% ಬಿಡುಗಡೆ ಮಾಡುತ್ತಿದ್ದಾರೆ.
  • 2017-18, 2018-19, 2019-20 ಹಾಗೂ 2020-21 ಜಿ.ಎಸ್.ಟಿ.ಯ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವ ಬಗ್ಗೆ ತಾವುಗಳು 2 ವರ್ಷದಿಂದ ಹಲವಾರು ಸಾರಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿರವರಿಗೆ ತಿಳಿಸಿದರು ಸಹ ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ.
  • ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯವರು ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳನ್ನು ಪಾವತಿಸುವ ಸಮಯದಲ್ಲಿ, ಎಂ.ಡಿ.ಪಿ.ಸಲ್ಲಿಸದ ಸಂದರ್ಭದಲ್ಲಿ 5 ಪಟ್ಟು ರಾಜಧನ (ರಾಯಲ್ಟಿ) ದಂಡವನ್ನು ವಿಧಿಸುತ್ತಿದ್ದಾರೆ.
  • ರಾಯಲ್ಟಿ ಮತ್ತು ಎಂ.ಡಿ.ಪಿ. ವ್ಯತ್ಯಾಸದ ಮೊತ್ತವನ್ನು ಸರ್ಕಾರವೆ ಭರಿಸುತ್ತದೆ ಎಂದು ಹಿಂದಿನ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಚಿವರ ಸಭೆಯಲ್ಲಿ ತಿಳಿಸಿರುತ್ತಾರೆ. ಆದರೆ ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ .
  • ಆದರೂ ಸದರಿ ಇಲಾಖೆಯವರು ಗುತ್ತಿಗೆದಾರರು ಬಳಸುವ ವಾಹನಗಳಿಗೆ ಅವೈಜ್ಞಾನಿಕ ದಂಡವನ್ನು ವಿಧಿಸುತ್ತಿದ್ದಾರೆ.
    ನಿರ್ಮಿತಿ ಕೇಂದ್ರ ಕೆ.ಆರ್.ಐ.ಡಿ.ಎಲ್. (Land Army) ಹಾಗೂ ಇತರೇ ಸಂಸ್ಥೆಗಳು ಜನಪ್ರತಿನಿಧಿಗಳ ಅನುಯಾಯಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತಾರೆ.
  • ಕೆಲಸ ತೆಗೆದುಕೊಂಡಿರುವ ಅನುಯಾಯಿಗಳು, ಕಾರ್ಯಕರ್ತರು ಅದೇ ಕಾಮಗಾರಿಯನ್ನು ಧೃಡೀಕೃತ ನೋಂದಾಯಿತ ಹಿರಿಯ ಗುತ್ತಿಗೆದಾರರಿಗೆ % ಹಣವನ್ನು ತೆಗೆದುಕೊಂಡು ಕಾಮಗಾರಿಗಳನ್ನು ಕೊಡುತ್ತಿದ್ದಾರೆ.
  • ಹಿರಿಯ ಗುತ್ತಿಗೆದಾರರಾದ ನಾವುಗಳು ಕಾರ್ಯಕರ್ತರಿಂದ ಮರುಗುತ್ತಿಗೆಯನ್ನು ಪಡೆಯುವುದು, ಸದರಿ ಕಾಮಗಾರಿಗಳ ಗುಣಮಟ್ಟವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿರುತ್ತದೆ.
  • ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿದ್ದಾರೆ.
  • ಪರಿವರ್ತಿಸಿ ತಮಗೆ ಬೇಕಾದ ಬಲಾಡ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡ‌ರ್ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ.
  • ಈ ವಿಚಾರವಾಗಿ ರಾಜ್ಯ ಸಂಘವು ಪದಾಧಿಕಾರಿಗಳ ಸಭೆನಡೆಸಲು ಹಲವಾರು ಸಾರಿ ಪತ್ರದ ಮುಖೇನ ಮತ್ತು ಮೌಕಿಕವಾಗಿ ತಿಳಿಸಿದರು ಸಹ ಸಂಬಂಧಪಟ್ಟಸಚಿವರು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸುತ್ತಿಲ್ಲ.

ಇಷ್ಟೆಲ್ಲ ಗಂಭೀರ ವಿಚಾರಗಳನ್ನು ಗುತ್ತಿಗೆದಾರರ ಒಕ್ಕೂಟ ಸರ್ಕಾರದ ಮುಂದೆ ಇಟ್ಟರೂ ಪ್ರಯೋಜನ ಮಾತ್ರ ನಯಾಪೈಸೆ ಆಗುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಗುತ್ತಿಗೆದಾರರನ್ನು ಮುದ್ದು ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಪ್ರಶ್ನೆ ಮಾಡುತ್ತಿರುವ ಗುತ್ತಿಗೆದಾರರನ್ನು ರಾಜಕೀಯ ಎಂದು ತೇಪೆ ಒರೆಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಕಾಲದಲ್ಲಿ ಒಂದಕ್ಕೆ ಮೂರರಷ್ಟು ಕಾಮಗಾರಿಗಳಿಗೆ ಅನುಮತಿ ಕೊಟ್ಟಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಹಿಂದಿನ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಸರ್ಕಾರದ ಕಡೆಯಿಂದ ಆಗುತ್ತಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಆಕ್ರೋಶ ಇದೇ ಮೊದಲಲ್ಲ

ರಾಜ್ಯ ಗುತ್ತಿಗೆದಾರರ ಈ ಅಸಮಾಧಾನ, ಆಕ್ರೋಶ, ಬೇಸರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದೇ ಮೊದಲ ಏನಲ್ಲ. ಕನಿಷ್ಠ 10ಕ್ಕೂ ಹೆಚ್ಚು ಬಾರಿ ಸರ್ಕಾರಕ್ಕೆ ಪತ್ರ ಬರೆದು ಹಣ ಪಡೆಯುವ ಪರಿಸ್ಥಿತಿ ಗುತ್ತಿಗೆದಾರರಿಗೆ ಬಂದಿದೆ. ಒಂದು ಕಡೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಹೆಚ್ಚಾಗುತ್ತಿದ್ದು, ಮತ್ತೊಂದು ಕಡೆ ಕೆಲಸ ಮಾಡಬೇಕಾದ ಗುತ್ತಿಗೆದಾರರೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ 80% ಕಮಿಷನ್: ಆರ್ ಅಶೋಕ್ ಸ್ಫೋಟಕ ಆರೋಪ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ಚುನಾವಣೆಗೂ ಮೊದಲು ಇದೇ ಗುತ್ತಿಗೆದಾರರನ್ನು ಜೈ ಎಂದು ಹಾಡಿ ಹೊಗಳುತ್ತಿದ್ದ ಕಾಂಗ್ರೆಸ್, ಈಗ ಗುತ್ತಿಗೆದಾರರು ಎಂದರೆ ಬಿಸಿ ತುಪ್ಪದಂತೆ ಭಾವಿಸುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ