ಕಾಂಗ್ರೆಸ್ ಸರ್ಕಾರದಲ್ಲಿ 80% ಕಮಿಷನ್: ಆರ್ ಅಶೋಕ್ ಸ್ಫೋಟಕ ಆರೋಪ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ
ಗುತ್ತಿಗೆದಾರರ ಸಂಘದ ಪತ್ರ ಉಲ್ಲೇಖಿಸಿ ಪ್ರತಿಪಕ್ಷ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ 80% ಕಮಿಷನ್ ಆರೋಪ ಮಾಡಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ತಾನೇ ಭ್ರಷ್ಟಾಚಾರದ ಬಲೆಗೆ ಸಿಲುಕಿದೆ. ಗುತ್ತಿಗೆದಾರರ ಪತ್ರವೇ ಇದಕ್ಕೆ ಸಾಕ್ಷಿ ಎಂದು ಆರ್. ಅಶೋಕ ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 29: ಬಿಜೆಪಿ (BJP) ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್ ಬಂಡವಾಳ ಈಗ ಬಯಲಾಗಿದೆ. ಗುತ್ತಿಗೆದಾರರ ಸಂಘದವರು 80% ಕಮಿಷನ್ ಆರೋಪ ಮಾಡಿ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ನೀಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ಆಗ್ರಹಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ವಾಗ್ದಾಳಿ ನಡೆಸಿದರು.
ಗುತ್ತಿಗೆದಾರರ ಸಂಘದಿಂದ ಸರ್ಕಾರದ ವಿರುದ್ಧ ಪತ್ರ ಬರೆದಿರುವ ವಿಚಾರವನ್ನು ಉಲ್ಲೇಖಿಸಿದ ಅಶೋಕ್, ‘ಇದು ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಎನ್ನುವುದಕ್ಕೆ ಸಾಕ್ಷಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಗುತ್ತಿಗೆದಾರರು 40% ಕಮಿಷನ್ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅದು ಡಬಲ್ ಆಗಿದೆ ಎಂದು ಪತ್ರ ಬರೆದಿದ್ದಾರೆ. ಇದೊಂದು ಆಧಿಕೃತ ಪತ್ರ. ಹೀಗಾಗಿ ಇದುವೇ ಸಾಕ್ಷಿ’ ಎಂದು ಅಶೋಕ್ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ
ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ನಮ್ಮ ಬಳಿ ಸಾಕ್ಷಿ ಕೇಳುತ್ತಿದ್ದರು. ನಮ್ಮ ಸರ್ಕಾರ ಬಂದರೆ ಕಮಿಷನ್ ಪಡೆಯಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಅವರ ಸರ್ಕಾರದಲ್ಲಿ 80% ಸರ್ಕಾರ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಕಳೆದುಕೊಂಡಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಅಶೋಕ್ ಆಗ್ರಹಿಸಿದರು.
ತಮ್ಮ ಬುಡಕ್ಕೆ ಬರಬಹುದೆಂದು ನಾಗಮೋಹನ್ ದಾಸ್ ಆಯೋಗದ ಹಲ್ಲು ಮುರಿದಿದ್ದಾರೆ: ಅಶೋಕ್ ಟೀಕೆ
ಬಿಜೆಪಿ ಅವಧಿಯಲ್ಲಿನ ಹಗರಣಗಳ ತನಿಖೆಗೆಂದು ನೇಮಕ ಮಾಡಿದ್ದ ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದನ್ನು ಅಶೋಕ್ ಟೀಕಿಸಿದರು. ನಾಗಮೋಹನ್ ದಾಸ್ ಅವರ ಆಯೋಗದ ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ. ಕಾಂಗ್ರೆಸ್ ಮೇಲೆ ನಿರಂತರ ಭ್ರಷ್ಟಾಚಾರ ಆರೋಪ ಬರುತ್ತಿದೆ. ಮುಂದೆ ತಮಗೂ ಸಮಸ್ಯೆ ಆಗಬಹುದು ಎಂಬ ಭಯದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿ ಅವಧಿಯ ಹಗರಣಗಳ ತನಿಖೆಗೆ ರಚಿಸಿದ್ದ ನಾಗಮೋಹನ್ ದಾಸ್ ಆಯೋಗ ದಿಢೀರ್ ರದ್ದು!
ಗುತ್ತಿಗೆದಾರರ ಪತ್ರವನ್ನು ಹಿಡಿದು ನೀವು ರಾಜಕಾರಣ ಮಾಡಿದ್ದೀರಲ್ಲಾ, ಇಂದು ಇದೇ ಪತ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂದಿದೆ. ನಿಮಗೆ ನಾಚಿಕೆ ಆಗಲ್ಲವೇ? ರಾಹುಲ್ ಗಾಂಧಿ ಯವರೇ ಈಗ ಉತ್ತರ ಕೊಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಅಶೋಕ್ ಹೇಳಿದರು. ಕಮಿಷನ್ ಆರೋಪ ಮಾಡಿ ಗುತ್ತಿಗೆದಾರರ ಸಂಘವು ಸರ್ಕಾರಕ್ಕೆ ಬರೆದಿದೆ ಎನ್ನಲಾದ ಪತ್ರವನ್ನು ಉಲ್ಲೇಖಿಸಿ ಅಶೋಕ್ ಈ ಆರೋಪ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Mon, 29 September 25



