ಬ್ಯಾಂಕ್​ನಿಂದ ಹಣ ​ಡ್ರಾ ಮಾಡಿದವರನ್ನು ಟಾರ್ಗೆಟ್​ ಮಾಡ್ತಿದ್ದ ಖತರ್ನಾಕ್​ ‘ಪಲ್ಸರ್​’ ಗ್ಯಾಂಗ್​ ಅಂದರ್

ಬ್ಯಾಂಕಿನಿಂದ ದುಡ್ಡು ವಿತ್​ಡ್ರಾ ಮಾಡಿ ಬರುವವರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗುಂಪೊಂದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 

ಬ್ಯಾಂಕ್​ನಿಂದ ಹಣ ​ಡ್ರಾ ಮಾಡಿದವರನ್ನು ಟಾರ್ಗೆಟ್​ ಮಾಡ್ತಿದ್ದ ಖತರ್ನಾಕ್​ ‘ಪಲ್ಸರ್​’ ಗ್ಯಾಂಗ್​ ಅಂದರ್
ಪೊಲೀಸರು ಬಂಧಿಸಿದ ಅಂತಾರಾಜ್ಯ ಕಳ್ಳರು
Updated By: KUSHAL V

Updated on: Dec 03, 2020 | 6:38 PM

ಯಾದಗಿರಿ: ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಯಾವಾಗ ಯಾರು ಬಂದು ಏನು ದೋಚಿಕೊಂಡು ಹೋಗುತ್ತಾರೆ ಎನ್ನುವ ಚಿಂತೆ ಜನರನ್ನು ಕಾಡುತ್ತಿದೆ. ಸದ್ಯ ಜನರ ಈ ಆತಂಕಕ್ಕೆ ಪುಷ್ಟಿ ನೀಡುವಂತೆ  ಬ್ಯಾಂಕಿನಿಂದ ದುಡ್ಡು ವಿತ್​ಡ್ರಾ ಮಾಡಿ ಬರುವವರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗುಂಪೊಂದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ

ಕಳೆದ ಒಂದು ವರ್ಷದಿಂದ ಬ್ಯಾಂಕ್​ನಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ ಗ್ರಾಹಕರನ್ನೇ ಪಕ್ಕಾ ಟ್ರ್ಯಾಕ್ ಮಾಡಿ ಅಂಥವರ ಗಮನ ಬೇರೆಡೆ ಸೆಳೆದು ಲಕ್ಷ ಲಕ್ಷ ಎಗರಿಸಿಕೊಂಡು ಹೋಗ್ತಿದ್ದ ಗ್ಯಾಂಗ್​ ಒಂದು ಖಾಕಿ ಕೈಗೆ ಕೊನೆಗೂ ಸಿಕ್ಕಿಹಾಕಿಕೊಂಡಿದೆ. ಅಂದ ಹಾಗೆ, ಈ 7 ಮಂದಿ ನಮ್ಮ ರಾಜ್ಯದವರಲ್ಲ, ಬದಲಿಗೆ ದೂರದ ಓಡಿಶಾದಿಂದ ಬಂದ ಕುಖ್ಯಾತ ಖದೀಮರು. ತಮ್ಮ ಗುಂಪಿನ ಮಹಿಳಾ ಸದಸ್ಯರನ್ನ ಓಡಿಶಾದಿಂದ ಟ್ರೈನ್​ ಮೂಲಕ ಕರೆಸಿಕೊಂಡು ತಾವೂ ಬೈಕ್ ಮೇಲೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿ ಮನೆಯನ್ನ ಬಾಡಿಗೆಗೆ ಪಡೆದು ಅಲ್ಲಿಂದಲೇ ತಮ್ಮ ಕುಕೃತ್ಯಕ್ಕೆ ಸ್ಕೆಚ್​ ಹಾಕಿದ್ದಾರೆ.

ಮೊದಮೊದಲು, ಹಳ್ಳಿಗಳಿಗೆ ತೆರಳಿ ಬಟ್ಟೆ ವ್ಯಾಪಾರಸ್ಥರ ಸೋಗಿನಲ್ಲಿ ಗ್ರಾಮಸ್ಥರನ್ನು ಮರಳು ಮಾಡಿ ಕಳ್ಳತನ ಮಾಡಲು ಶುರುಮಾಡಿದ್ದರು. ತದ ನಂತರ, ಇದೇ ಗುಂಪಿನ 5 ಮಂದಿ ಪುರುಷರು ಕಪ್ಪು ಬಣ್ಣದ, ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್​ನಲ್ಲಿ ಸಿಟಿಯಲ್ಲಿ ರೌಂಡ್ಸ್​ ಹೊಡಿಯುತ್ತಾ ಬ್ಯಾಂಕ್​ನಿಂದ ಹಣ ವಿತ್​ಡ್ರಾ ಮಾಡಿಕೊಂಡು ಬರುತ್ತಿದ್ದವರನ್ನು ಹಿಂಬಾಲಿಸಿ  ಅವರು ನಿರ್ಜನ ಪ್ರದೇಶದ ಬಳಿ ತಲುಪುತ್ತಿದ್ದಂತೆ ನಿಮ್ಮ ಜೇಬಿನಿಂದ 100 ರೂಪಾಯಿ ಬಿದ್ದಿದೆ ತೆಗೆದುಕೊಳ್ಳಿ ಎಂದು ಹೇಳಿ ಈ ಐನಾತಿ ಕಳ್ಳರು ಜನರ ಗಮನ ಬೇರೆಡೆ ಸೆಳೆಯುತ್ತಿದ್ದರು. ನಂತರ ಅವರು ಬ್ಯಾಂಕ್​ನಿಂದ ತಂದ ಹಣವನ್ನ ಎಗರಿಸಿಕೊಂಡು ಪರಾರಿಯಾಗ್ತಿದ್ದರು.

ಕಳೆದ ಒಂದು ವರ್ಷದಲ್ಲಿ ಈ ಗುಂಪು ಯಾದಗಿರಿ ನಗರದಲ್ಲಿ ಮೂರು ಬಾರಿ ಇಂಥ ಕೆಲಸ ಮಾಡಿದ್ರೇ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಇಬ್ಬರ ಗಮನ ಬೇರೆಡೆ ಸೆಳೆದು ಹಣ ದೋಚಿದೆ. ಕೇವಲ ಯಾದಗಿರಿ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ, ನೆರೆಯ ರಾಯಚೂರು ಜಿಲ್ಲೆಯಲ್ಲೂ ಕಳ್ಳತನ ಮಾಡ್ತಾಯಿತ್ತು. ಸದ್ಯ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಈ ಗ್ಯಾಂಗ್​ನವರು ಮಾಡಿರುವ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದರ ಆಧಾರದ ಮೇಲೆ ಸದಸ್ಯರ ಬೆನ್ನತ್ತಿದ ಎರಡು ಜಿಲ್ಲೆಯ ಪೊಲೀಸರಿಗೆ ಕೊನೆಗೂ ಈ ಗ್ಯಾಂಗ್ ಸೆರೆಸಿಕ್ಕಿದೆ.

ಯಾದಗಿರಿ ಎಸ್​.ಪಿ ರಿಷಿಕೇಶ್ ಭಗವಾನ್, ಯಾದಗಿರಿ ನಗರ ಠಾಣೆಯ PSI ಕೃಷ್ಣ ಸುಬೇದಾರ ನೇತೃದಲ್ಲಿ ರಚನೆಯಾದ ತಂಡ ಕಳ್ಳರ ಗ್ಯಾಂಗ್​ನ ಅರೆಸ್ಟ್ ಮಾಡಿದೆ. ಗುಂಪಿನ ಎಲ್ಲಾ ಏಳು ಮಂದಿ ಕಳ್ಳರನ್ನು ರಾಯಚೂರಿನ ಗೂಗಲ್ ಗ್ರಾಮದ ಬಾಡಿಗೆ ಮನೆಯಿಂದ ಅರೆಸ್ಟ್ ಮಾಡಲಾಯಿತು. ಇನ್ನು, ಈ ಗ್ಯಾಂಗ್ ಬಳಿಯಿದ್ದ  4 ಲಕ್ಷ ರೂ. ನಗದನ್ನ ಸಹ ಜಪ್ತಿ ಮಾಡಲಾಗಿದೆ.

ಒಟ್ಟಾರೆ, ಅಂತಾರಾಜ್ಯ ಕಳ್ಳರ ಗ್ಯಾಂಗ್ ಕೊನೆಗೂ ಅರೆಸ್ಟ್ ಆಗಿದೆ. ಆದ್ರೆ ಇಂಥವರು ನಗರದಲ್ಲಿ ಇನ್ನೂ ಇರಬಹುದು. ಹೀಗಾಗಿ, ಬ್ಯಾಂಕ್​ನಿಂದ ಹಣ ವಿತ್​ಡ್ರಾ ಮಾಡಿಕೊಂಡು ಬರುವವರು ಹಾಗೂ ಹಣ ತೆಗೆದುಕೊಂಡು ಹೋಗುವವರು ಜೋಪಾನ. ತಮ್ಮ ಹಣದ ಮೇಲೆ ನಿಗಾ ಇಟ್ಕೊಳ್ಳಿ. ಇಲ್ಲವಾದರೆ, ಇಂಥ ಖತರ್ನಾಕ್ ಕಳ್ಳರು ನಿಮ್ಮ ಹಣವನ್ನ ಎಗರಿಸಿದ್ರು ಅಚ್ಚರಿ ಪಡುವಂತಿಲ್ಲ.
ಅಮೀನ್ ಹೊಸುರ್

BMTC, KSRTC ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿಸುತ್ತಿದ್ದ ಕಳ್ಳರ ಗ್ಯಾಂಗ್‌ ಅಂದರ್