ಚಿತ್ರದುರ್ಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತ್ತು. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್ಡೌನ್ ಜಾರಿಗೆ ತಂದಿದೆ. ಲಾಕ್ಡೌನ್ನ ಕಾರಣದಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಸಿಗದಂತಾಗಿದೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಬೇಜವಾಬ್ದಾರಿತನ ತೋರಿದ್ದು, ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಚಿತ್ರದುರ್ಗ ತಾಲೂಕಿನ ಚಿಕ್ಕ ಕಬ್ಬಿಗೆರೆ ಗ್ರಾಮದಲ್ಲಿ ಸುಮಾರು 800 ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಅನೇಕರು ಸದ್ಯ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಕೊವಿಡ್ ಲಕ್ಷಣ ಕಂಡು ಬಂದ ಹಿನ್ನೆಲೆ ಎರಡು ದಿನದ ಹಿಂದೆಯೇ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಬ್ ಟೆಸ್ಟಿಂಗ್ ಮಾಡಿದೆ. 22 ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢ ಪಟ್ಟಿದೆ. ಆದರೆ ಸೋಂಕಿತರನ್ನು ಆಸ್ಪತ್ರೆ ಅಥವಾ ಕೊವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡುವಲ್ಲಿ ನಿರ್ಲಕ್ಷ ತೋರಲಾಗಿದೆ. ನಿನ್ನೆಯಿಂದ ಸೋಂಕಿತರು ಮನೆ ಮತ್ತು ದೇಗುಲ ಕಟ್ಟೆಯಲ್ಲೇ ಚಿಕಿತ್ಸೆಗಾಗಿ ಕಾದು ಕುಳಿತಿದ್ದಾರೆ. ಗ್ರಾಮ ಪಂಚಾಯತಿ ಇಂದ ಹಿಡಿದು ಡಿಸಿವರೆಗೆ ಕೇಳಿದರೂ ಯಾರು ಈ ಬಗ್ಗೆ ಗಮನಕೊಡುತ್ತಿಲ್ಲ ಎಂದು ರೈತ ಮುಖಂಡ ನಾಗರಾಜ್ ತಿಳಿಸಿದ್ದಾರೆ.
ಇನ್ನೂ ಸೋಂಕು ದೃಢ ಪಟ್ಟ ಎರಡು ದಿನ ಬಳಿಕ ಸೋಂಕಿತರನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಕಳಿಸಲಾಗಿದೆ. ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಡಿಹೆಚ್ಓ ಡಾ.ಪಾಲಾಕ್ಷ ಅವರನ್ನು ಕೇಳಿದರೆ ಈಗಾಗಲೇ ಸ್ವಾಬ್ ಟೆಸ್ಟಿಂಗ್ ಮಾಡಲಾಗಿದ್ದು, 22 ಜನರಿಗೆ ಸೋಂಕು ದೃಢಪಟ್ಟಿದೆ. ಆ ಪೈಕಿ ಶುಗರ್, ಬಿಪಿ ಸೇರಿ ಇತರೆ ರೋಗ ಇರುವವರನ್ನು ಆಸ್ಪತ್ರೆಗೆ, ಇನ್ನುಳಿದಂತೆ ಎ ಸಿಂಪ್ಟಮ್ಸ್ ಇರುವವರನ್ನು ಕೇರ್ ಸೆಂಟರ್ಗೆ ಶಿಫ್ಟ್ ಮಾಡಲು ಕ್ರಮ ಕೈಗೊಂಡಿದ್ದೇವೆ. ಅಲ್ಲದೆ ನಮ್ಮ ಸಿಬ್ಬಂದಿ ಮೂಲಕ ಮನೆ ಮನೆ ಹೆಲ್ತ್ ಸರ್ವೇ ಸಹ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಒಟ್ಟಾರೆಯಾಗಿ ಚಿತ್ರದುರ್ಗದ ಚಿಕ್ಕ ಕಬ್ಬಿಗೆರೆ ಗ್ರಾಮದಲ್ಲಿ ಸೋಂಕಿತರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆಸ್ಪತ್ರೆಗೆ ಶಿಫ್ಟ್ ಮಾಡುವಲ್ಲಿ ದಿನಗಟ್ಟಲೇ ವಿಳಂಬ ಮಾಡಿದ್ದಾರೆ . ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ತುರ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ:
ಪಾಳುಬಿದ್ದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಉದ್ಯಾನವನ; ಮೂಗು ಮುಚ್ಚಿಕೊಂಡೇ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು