ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಕರ್ನಾಟಕ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಕಂಡುಬಂದಿದೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಹೊಸ ಪ್ರಕರಣಗಳು ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರ ಬಳಿ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ಕೊರೊನಾ ರೂಪಾಂತರಿ ಹರಡುವಿಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಜೂನ್ 28ರಿಂದ ಈ ಕ್ರಮ ಜಾರಿಯಲ್ಲಿರಲಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ಹೆಚ್ಚಾಗುತ್ತಿದೆ. ಅದರಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಟುಬರುತ್ತಿದೆ. ಹೀಗಾಗಿ ಗಡಿಭಾಗಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದೊಂದಿಗೆ ಗಡಿಭಾಗಗಳನ್ನು ಹಂಚಿಕೊಂಡಿದೆ. ಮೈಸೂರು, ಚಾಮರಾಜನಗರ, ಮಂಗಳೂರು, ಸುಳ್ಯ, ಪುತ್ತೂರು ಹಾಗೂ ದಕ್ಷಿಣ ಕನ್ನಡದ ಇನ್ನೂ ಕೆಲವು ಊರುಗಳು ಕೇರಳದ ಗಡಿಭಾಗವಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡದ ಕಾರವಾರದಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಬಗ್ಗೆ ನಿಗಾ ವಹಿಸಲಾಗುತ್ತದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿಯಂತೆ ಒಟ್ಟು 51 ಡೆಲ್ಟಾ ಪ್ಲಸ್ ಕೊರೊನಾ ಪ್ರಕರಣಗಳು ವರದಿಯಾಗಿದೆ. ದೇಶದ 12 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಕೊರೊನಾ ಕಂಡುಬಂದಿದೆ. ಡೆಲ್ಟಾ ಪ್ಲಸ್ ಕೊವಿಡ್ ವೈರಾಣು ಡೆಲ್ಟಾದ ರೂಪಾಂತರವಾಗಿದೆ. ಡೆಲ್ಟಾ ರೂಪಾಂತರಿಯ ಕಾರಣದಿಂದಲೇ ಕೊರೊನಾ ಎರಡನೇ ಅಲೆ ಭಾರತದಲ್ಲಿ ಗಾಢ ಪರಿಣಾಮ ಬೀರಿತ್ತು.
ಈ ಮಧ್ಯೆ, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಕಂಡುಬರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಕೆಲವು ತಜ್ಞರು ಅಲ್ಲಗಳೆದಿದ್ದಾರೆ. ಮುಂಬೈ ನಗರದಲ್ಲಿ ನಡೆಸಿರುವ ಸೆರೋ ಗಣತಿಯ ಪ್ರಕಾರ 18 ವರ್ಷದ ಒಳಗಿನ ಶೇಕಡಾ 51.18 ರಷ್ಟು ಮಕ್ಕಳ ದೇಹದಲ್ಲಿ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಇರುವುದು ಕಂಡುಬಂದಿದೆ. ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ಮಾಲಿಕ್ಯುಲರ್ ಡಯಾಗ್ನಿಸ್ಟಿಕ್ ಲ್ಯಾಬೊರೇಟರಿ ಏಪ್ರಿಲ್ 1ರಿಂದ ಜೂನ್ 15ರ ವರೆಗೆ ನಡೆಸಿರುವ ಈ ಸರ್ವೆ ಪ್ರಕಾರ ಈಮಾಹಿತಿ ದೃಢಪಟ್ಟಿದೆ.
ಇದನ್ನೂ ಓದಿ: ಮುಂಬೈನ ಶೇಕಡಾ 50ಕ್ಕೂ ಹೆಚ್ಚಿನ ಮಕ್ಕಳಲ್ಲಿ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಕಂಡುಬಂದಿದೆ: ಸೆರೊ ಸರ್ವೆ
Published On - 8:48 pm, Mon, 28 June 21