ಮುಂಬೈನ ಶೇಕಡಾ 50ಕ್ಕೂ ಹೆಚ್ಚಿನ ಮಕ್ಕಳಲ್ಲಿ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಕಂಡುಬಂದಿದೆ: ಸೆರೊ ಸರ್ವೆ
ಮಾರ್ಚ್‌ನಲ್ಲಿ ನಡೆಸಿದ್ದ ಸೆರೋ ಸರ್ವೆಯಲ್ಲಿ 18 ವರ್ಷದ ಕೆಳಗಿನ ಮಕ್ಕಳಲ್ಲಿ ಶೇಕಡಾ 39.4 ಮಂದಿಯಲ್ಲಿ ರೋಗನಿರೋಧಕ ಶಕ್ತಿ ಕಂಡುಬಂದಿತ್ತು. ಕೊರೊನಾ ಮೂರನೇ ಅಲೆಯ ಕುರಿತ ಆತಂಕದ ಕಾರಣದಿಂದ ಹಾಗೂ ಮುನ್ನೆಚ್ಚರಿಕೆಯ ಉದ್ದೇಶದಿಂದ ಈ ಅಧ್ಯಯನ ಕೈಗೊಳ್ಳಲಾಗಿತ್ತು.
ಮುಂಬೈ: ನಗರದಲ್ಲಿ ನಡೆಸಿರುವ ಸೆರೋ ಗಣತಿಯ ಪ್ರಕಾರ 18 ವರ್ಷದ ಒಳಗಿನ ಶೇಕಡಾ 51.18 ರಷ್ಟು ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಇರುವುದು ಕಂಡುಬಂದಿದೆ. ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ಮಾಲಿಕ್ಯುಲರ್ ಡಯಾಗ್ನಿಸ್ಟಿಕ್ ಲ್ಯಾಬೊರೇಟರಿ ಏಪ್ರಿಲ್ 1ರಿಂದ ಜೂನ್ 15ರ ವರೆಗೆ ನಡೆಸಿರುವ ಈ ಸರ್ವೆ ಪ್ರಕಾರ ಈಮಾಹಿತಿ ದೃಢಪಟ್ಟಿದೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಮ್‌ಸಿ) ಹೇಳಿಕೆಯಂತೆ, ಒಟ್ಟು 2,176 ರಕ್ತದ ಮಾದರಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಬಹುತೇಕ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಇರುವುದು ಖಚಿತವಾಗಿದೆ. ಈ ಮೊದಲಿನ ಸೆರೋ ಅಧ್ಯಯನಕ್ಕಿಂತ ಈ ಬಾರಿ ಹೆಚ್ಚು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಂಡುಬಂದಿದೆ.
10ರಿಂದ 14 ವರ್ಷದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಂಡುಬಂದಿದೆ. ಈ ವಯಸ್ಸಿನವರಲ್ಲಿ 53.43 ಶೇಕಡಾ ರೋಗನಿರೋಧಕ ಶಕ್ತಿ ಇದೆ. 1 ರಿಂದ 4 ವರ್ಷದ ವಯಸ್ಸಿನ ಮಕ್ಕಳಲ್ಲಿ 51.04 ಶೇಕಡಾ ರೋಗನಿರೋಧಕ ಶಕ್ತಿ ಇದೆ. 5 ರಿಂದ 9 ವರ್ಷದ ಮಕ್ಕಳಲ್ಲಿ ಶೇಕಡಾ 47.33ರಷ್ಟು ರೋಗನಿರೋಧಕ ಶಕ್ತಿ ಇದೆ. 15 ರಿಂದ 18 ವರ್ಷದ ಮಕ್ಕಳಲ್ಲಿ ಶೇಕಡಾ 51.39ರಷ್ಟು ರೋಗನಿರೋಧಕ ಶಕ್ತಿ ಕಂಡುಬಂದಿದೆ.
ಮಾರ್ಚ್‌ನಲ್ಲಿ ನಡೆಸಿದ್ದ ಸೆರೋ ಸರ್ವೆಯಲ್ಲಿ 18 ವರ್ಷದ ಕೆಳಗಿನ ಮಕ್ಕಳಲ್ಲಿ ಶೇಕಡಾ 39.4 ಮಂದಿಯಲ್ಲಿ ರೋಗನಿರೋಧಕ ಶಕ್ತಿ ಕಂಡುಬಂದಿತ್ತು. ಕೊರೊನಾ ಮೂರನೇ ಅಲೆಯ ಕುರಿತ ಆತಂಕದ ಕಾರಣದಿಂದ ಹಾಗೂ ಮುನ್ನೆಚ್ಚರಿಕೆಯ ಉದ್ದೇಶದಿಂದ ಈ ಅಧ್ಯಯನ ಕೈಗೊಳ್ಳಲಾಗಿತ್ತು.
ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾರಣದಿಂದ ನೆರೆಯ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಎಂದು ತಿಳಿಸಿದೆ. ಕೊರೊನಾ ರೂಪಾಂತರಿ ಹರಡುವಿಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಜೂನ್ 28ರಿಂದ ಈ ಕ್ರಮ ಜಾರಿಯಲ್ಲಿರಲಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ಹೆಚ್ಚಾಗುತ್ತಿದೆ. ಅದರಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಟುಬರುತ್ತಿದೆ. ಹೀಗಾಗಿ ಗಡಿಭಾಗಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.
Published On - 8:13 pm, Mon, 28 June 21