ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯವರ ಬೆದರಿಕೆ: ಎಸ್ಪಿ ಕಚೇರಿಗೆ ಓಡೋಡಿ ಬಂದ ನವ ವಿವಾಹಿತರು

ಪ್ರೀತಿಸಿ ಮದುವೆಯಾದ ನವ ವಿವಾಹಿತರು ಯುವತಿ ಮನೆಯವರಿಂದ ಜೀವ ಬೆದರಿಕೆ ಹಿನ್ನೆಲೆ ಎಸ್ಪಿ ಕಚೇರಿಗೆ ಓಡೋಡಿ ಬಂದ ಘಟನೆ ಬೀದರ್​ನಲ್ಲಿ ನಡೆದಿದೆ. ಜಾತಿ ಬೇರೆ ಎಂಬ ಕಾರಣಕ್ಕೆ ಯುವಕನನ್ನು ಯುವತಿ ಮನೆಯವರು ಒಪ್ಪಿಲ್ಲ. ಇನ್ನು ನಾಲ್ಕು ತಿಂಗಳ ಹಿಂದೆ ಯುವತಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಆಗಿತ್ತು. ಆ ಬಳಿಕ ಪ್ರೀತಿಸಿದವನ ಜೊತೆ ಓಡಿಹೋಗಿ ಈಕೆ ಮದುವೆ ಆಗಿದ್ದಳು ಎನ್ನಲಾಗಿದೆ.

ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯವರ ಬೆದರಿಕೆ: ಎಸ್ಪಿ ಕಚೇರಿಗೆ ಓಡೋಡಿ ಬಂದ ನವ ವಿವಾಹಿತರು
ನವ ವಿವಾಹಿತರು
Edited By:

Updated on: Dec 16, 2025 | 6:34 PM

ಬೀದರ್​​, ಡಿಸೆಂಬರ್​​ 16: ಪರಸ್ಪರ ಪ್ರೀತಿಸಿ ಮದುವೆಯಾದ ನವ ದಂಪತಿ ಜೀವಭಯದ ಹಿನ್ನೆಲೆ ತಮಗೆ ರಕ್ಷಣೆ ಕೊಡಿ ಎಂದು ಎಸ್ಪಿ ಕಚೇರಿಗೆ ಓಡೋಡಿ ಬಂದ ಪ್ರಸಂಗ ಬೀದರ್​​ನಲ್ಲಿ ನಡೆದಿದೆ. ಮನೆಯವರ ವಿರೋಧದ ನಡುವೆಯೂ ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ, ಡಿ.12ರಂದು ಬೀದರ್ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಕಾನೂನಿನ ಪ್ರಕಾರ ವಿವಾಹ ನೋಂದಣಿ ಮಾಡಿಸಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗದ್ಲೆಗಾಂವ್ ಗ್ರಾಮದ ಸಂಗೀತಾ ಮತ್ತು ಗುಂಟುರು ಗ್ರಾಮದ ಪ್ರವೀಣ ಕಳೆದೊಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಬಳಿಕ ಮದುವೆಯನ್ನೂ ಆಗಿದ್ದಾರೆ. ಆದರೆ ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕಾಗಿ ಹುಡುಗಿಯ ಮನೆಯವರು ಈ ಮದುವೆಯನ್ನ ಒಪ್ಪುತ್ತಿಲ್ಲ. ಹೀಗಾಗಿ ಹುಡುಗನಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಜೊತೆಗೆ ಪ್ರವೀಣ ಅವರ ಮನೆಯವರಿಗೂ ಸಂಗೀತಾ ಕುಟುಂಬದವರು ಮಾನಸಿಕವಾಗಿ ಕಿರುಕುಳು ಕೊಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ತಿಳಿಸಿದರೂ ಪ್ರಯೋಜನವಾಗದ ಕಾರಣ ನಮಗೆ ರಕ್ಷಣೆ ಕೊಡಿ ಎಂದು ನವ ವಿವಾಹಿತರು ಬೀದರ್ ಎಸ್ಪಿ ಕಚೇರಿಗೆ ಆಗಮಿಸಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಯಾಗಿ 24 ಗಂಟೆಗಳ ಒಳಗೆ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ

ಇನ್ನು ಸಂಗೀತಾಳಿಗೆ ತನ್ನ ಅತ್ತೆಯ ಮಗನ ಜೊತೆಗೆ ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ ಕೂಡ ಆಗಿತ್ತು. ಆ ಬಳಿಕ ಓಡಿಹೋಗಿ ಪ್ರವೀಣ್​​ ಜೊತೆ ಆಕೆ ವಿವಾಹವಾಗಿದ್ದು, ಮನೆಯವರ ಭಯಕ್ಕೆ ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಕೆಲ ದಿನಗಳ ಕಾಲ ಇವರು ನೆಲೆಸಿದ್ದರು. ಇತ್ತ ಮಗಳು ನಾಪತ್ತೆ ಬೆನ್ನಲ್ಲೇ ಸಂಗೀತಾ ಮನೆಯವರು ಮುಡಬಿ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್​​ ದಾಖಲಿಸಿದ್ದಾರೆ. ಹೀಗಾಗಿ ನೀವು ಪೊಲೀಸ್ ಠಾಣೆಗ ಬನ್ನಿ ಎಂದು ಹುಡುಗನಿಗೆ ಪೊಲೀಸರು ಪದೇ ಪದೇ ಫೋನ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಹುಡುಗಿಯ ಸೋದರ ಮಾವ, ಅಪ್ಪ ಇಬ್ಬರೂ ಪ್ರವೀಣನ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಾನು ಇದ್ದರೂ ಪ್ರವೀಣನ ಜೊತೆ ಸತ್ತರೂ ಅವನ ಜೊತೆಗೆ ಎಂದು ಸಂಗೀತಾ ಹೇಳುತ್ತಿದ್ದಾಳೆ. ನಾವು ಮನಸಾರೆ ಪ್ರೀತಿಸಿ ಮದುವೆ ಆಗಿದ್ದೇವೆ ಎಂದು ಜೋಡಿ ಅಲವತ್ತುಕೊಂಡಿದ್ದು, ಸಾಯೋದಾದರೆ ನಾವು ಇಬ್ಬರೂ ಸಾಯುತ್ತೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.