ಬೆಂಗಳೂರು, ಡಿಸೆಂಬರ್ 25: ಬಿಜೆಪಿ ಎಂಎಲ್ಸಿ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವಣ ಪ್ರಕರಣದಲ್ಲಿ ರಾಹುಲ್ ಗಾಂಧಿ ಹೆಸರು ತಳಕು ಹಾಕದಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ದೂರವಾಣಿ ಕರೆ ಮಾಡಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿಟಿ ರವಿ ಹೇಳಿದ್ದಕ್ಕೆ ಕೊಲೆಗಾರ ಪದ ಬಳಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥನೆ ಮಾಡಿಕೊಂಡಿದ್ದರು. ಈ ಘಟನೆ ನಡೆದ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರೊಬ್ಬರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರುನ ಎನ್ನಲಾಗಿದೆ. ಹಿರಿಯ ಪರಿಷತ್ ಸದಸ್ಯ ಕೆಸಿ ವೇಣುಗೋಪಾಲ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ರಾಹುಲ್ ಗಾಂಧಿಗೆ ಕೆಸಿ ವೇಣುಗೋಪಾಲ್ ವಿಚಾರ ತಿಳಿಸಿದ್ದರು. ಇದೇ ವೇಳೆ, ಘಟನೆಯಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡ್ತಿರುವುದಕ್ಕೆ ರಾಹುಲ್ ಗಾಂಧಿ ಗರಂ ಆಗಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿ ಸಿಟ್ಟಾಗುತ್ತಿದ್ದಂತೆಯೇ ಪರಿಷತ್ ಸದಸ್ಯನಿಗೆ ವೇಣುಗೋಪಾಲ್ ವಾಪಸ್ ಕರೆ ಮಾಡಿದ್ದಾರೆ. ಸಭಾಪತಿ ಕೊಠಡಿಯಲ್ಲಿ ಇದ್ದಾಗಲೇ ಪರಿಷತ್ ಸದಸ್ಯನಿಗೆ ದೆಹಲಿಯಿಂದ ಕರೆ ಬಂದಿದೆ. ಈ ವೇಳೆ ಕರೆ ಸ್ವೀಕರಿಸಿದ ಪರಿಷತ್ ಸದಸ್ಯ, ಪ್ರಭಾವಿ ಸಚಿವರಿಗೆ ಪೋನ್ ಕೊಟ್ಟಿದ್ದಾರೆ. ಇದೇ ವೇಳೆ, ರಾಹುಲ್ ಗಾಂಧಿ ಹೆಸರು ಈ ವಿಚಾರದಲ್ಲಿ ತಳಕು ಹಾಕಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಹೆಸರು ಯಾಕೆ ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ಕಾರಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೀಡಿರುವ ದೂರಿನಲ್ಲಿಯೂ ರಾಹುಲ್ ಗಾಂಧಿ ವಿಚಾರ ಪ್ರಸ್ತಾಪ ಇಲ್ಲ. ದೂರಿನಲ್ಲಿ, ಕೇವಲ ರಾಷ್ಟ್ರೀಯ ನಾಯಕರು ಎಂದಷ್ಟೇ ಉಲ್ಲೇಖಿಸಲಾಗಿದೆ.
ಫೋನ್‌ನಲ್ಲಿ ವೇಣುಗೋಪಾಲ್ ಮಾತು ಮುಗಿಸುತ್ತಿದ್ದಂತೆಯೇ ಪರಿಷತ್ ಸದಸ್ಯನ ವಿರುದ್ಧ ಪ್ರಭಾವೀ ಸಚಿವರು ಕೆಂಡಾಮಂಡಲವಾಗಿದ್ದರು ಎಂಬುದೂ ಗೊತ್ತಾಗಿದೆ. ವೇಣುಗೋಪಾಲ್ ಕರೆ ಸ್ವೀಕರಿಸಿ ಸಚಿವರಿಗೆ ಪೋನ್ ನೀಡಿದ್ದಕ್ಕೆ ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸಿ.ಟಿ.ರವಿ ಬಂಧನ ಪ್ರಕರಣ: ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಕೆಸಿ ವೇಣುಗೋಪಾಲ್ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆಪ್ತರು ರಾಹುಲ್ ಗಾಂಧಿ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡಿಲ್ಲ. ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಹೇಳಿಕೆಗೆ ಅಗ್ರೆಸಿವ್ ತಿರುಗೇಟು ನೀಡಿಲ್ಲ ಎಂದು ಮೂಲಗಳು ಹೇಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ