ಚಿಕ್ಕಮಗಳೂರು, ಮಾ.11: ಸಂವಿಧಾನ ತಿದ್ದುಪಡಿ (Constitution amendment) ಮಾಡಲು ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹಗಡೆ (Anantkumar Hegde) ನೀಡಿದ ಹೇಳಿಕೆ ಭಾರೀ ಟೀಕೆ ಹಾಗೂ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಒಂದೆಡೆ, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದು, ಇನ್ನೊಂದೆಡೆ, ಹೆಗಡೆ ಹೇಳಿಕೆಗೆ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಈ ನಡುವೆ ಬಿಜೆಪಿ ಹಿರಿಯ ನಾಯಕ ಸಿಟಿ ರವಿ (CT Ravi) ಅವರು ಹೆಗಡೆ ಪರ ಬ್ಯಾಟ್ ಬೀಸಿದ್ದಾರೆ.
ಚಿಕ್ಕಮಗಳೂರು ನಗರದ ಪಾಂಚಜನ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಇವರ (ಕಾಂಗ್ರೆಸ್) ಕಿರುಚಾಟ ನೋಡಿ ಅನಂತಕುಮಾರ್ ಏನು ಹೇಳಿದ್ದಾರೆ ಎಂದು ನಾನು ವಿಡಿಯೋ ನೋಡಿದೆ. ಅನಂತಕುಮಾರ್ ಹೆಗಡೆ ಹೇಳಿರುವುದರಲ್ಲಿ ತಪ್ಪೇನಿದೆ? ಅಂಬೇಡ್ಕರ್ ಅವರು ಸಂವಿಧಾನದ ಮೂಲ ಪ್ರತಿಯಲ್ಲಿ ರಾಮನ ಚಿತ್ರ ಹಾಕಿದ್ದರು. ರಾಮನ ಚಿತ್ರ ಮೂಲ ಪ್ರತಿಯಲ್ಲಿ ಹಾಕಿದ ಉದ್ದೇಶವೇನು? ಇದು ರಾಮನ ಭೂಮಿ ಅಂತ ಅಂಬೇಡ್ಕರ್ ಅವರಿಗೂ ಗೊತ್ತಿತ್ತು ಎಂದರು.
ಸಂವಿಧಾನವನ್ನ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಪೈಕಿ 95 ಬಾರಿ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ತಿದ್ದುಪಡಿಗೆ ಸಂವಿಧಾನದಲ್ಲೇ ಅವಕಾಶವಿದೆ. ಆಂಬೇಡ್ಕರ್ ಆಶಯದಂತೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು. ಭಾರತ ರಾಷ್ಟ್ರವೇ ಅಲ್ಲ ಒಕ್ಕೂಟ ಅನ್ನುವವರು ಸಂವಿಧಾನ ವಿರೋಧಿಗಳು ಎಂದರು.
ಇದನ್ನೂ ಓದಿ: ಸಂವಿಧಾನ ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿ ರಕ್ತಪಾತ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ನಮಗೆ ಮೇಲು ಕೀಳು ಭಾವನೆ ಇಲ್ಲ. ಆಂಬೇಡ್ಕರ್ ಆಶಯದ ಮೇಲೆ ರಾಜಕಾರಣ ಮಾಡುತ್ತಿರುವುದು ಬಿಜೆಪಿ. ಅಂಬೇಡ್ಕರ್ ಈ ದೇಶವನ್ನು ಏಕತೆಯ ಹಾದಿಯಲ್ಲಿ ಕೊಂಡೊಯ್ಯಲು ಸಂವಿಧಾನ ಕೊಟ್ಟಿದ್ದು. ಆದರೆ, ಇದೊಂದು ರಾಷ್ಟ್ರವೇ ಅಲ್ಲ ಒಕ್ಕೂಟ ಎಂದು ಸಂವಿಧಾನ ವಿರೋಧಿಗಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಂವಿಧಾನ ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಸಿಟಿ ರವಿ, ರಕ್ತಪಾತ ಆಗುವ ಪ್ರಶ್ನೆಯೇ ಬರುವುದಿಲ್ಲ. ಭಾರತ ಸಾರ್ವಭೌಮ ರಾಷ್ಟ್ರ, ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ. ಜಗತ್ತಿನ ಯಾವ ಶಕ್ತಿಗೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಸಂವಿಧಾನ ತಿದ್ದುಪಡಿಗೆ ಸಂವಿಧಾನವೇ ಅವಕಾಶ ಕೊಟ್ಟಿದೆ. ಕಾಂಗ್ರೆಸ್ಸೇ 95ಕ್ಕೂ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ರಕ್ತಪಾತ ಆಗುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಇದನ್ನೂ ಓದಿ: ಅನಂತಕುಮಾರ್ ಹೆಗಡೆಯ ಸಂವಿಧಾನ ತಿದ್ದುಪಡಿ ಹೇಳಿಕೆ ವೈಯಕ್ತಿಕ: ಅಂತರ ಕಾಯ್ದುಕೊಂಡ ಬಿಜೆಪಿ
ಭಾರತ ವಿಭಜನೆಗೂ ಮುನ್ನ ಕಾಂಗ್ರೆಸ್ಸಿಗರ ಶೌರ್ಯವನ್ನ ಕಂಡಿದ್ದೇವೆ. ನನ್ನ ದೇಹ ತುಂಡಾದರೂ ದೇಶ ತುಂಡಾಗಲು ಬಿಡುವುದಿಲ್ಲ ಎಂದಿದ್ದರು. ದೇಶ ತುಂಡು ಮಾಡುತ್ತೇವೆ ಎಂದವರನ್ನು ಕತ್ತರಿಸಿ ದೇಶ ಉಳಿಸುತ್ತೇವೆ ಎಂದಿದ್ದರು. ಆದರೆ ಸ್ವಾತಂತ್ರ್ಯ ನಂತರ ದೇಶ ತುಂಡು ಮಾಡಲು ಕಾಂಗ್ರೆಸ್ನವರೇ ಹೋಗಿ ಸಹಿ ಹಾಕಿದರು ಎಂದರು.
ಸಂವಿಧಾನ ಆಚರಣೆ ದಿನ ಜಾರಿಗೆ ತಂದಿದ್ದೆ ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸಿಗರು ಅದನ್ನ ಕಾನೂನಿನ ದಿನ ಎಂದು ಕರೆಯುತ್ತಿದ್ದರು. ಕಾಂಗ್ರೆಸ್ ಅಂಬೇಡ್ಕರ್ ಹಾಗೂ ಸಂವಿಧಾನ ಎರಡಕ್ಕೂ ಅಪಚಾರ ಎಸಗಿದೆ. ಸಂವಿಧಾನ ಹಾಗೂ ಅಂಬೇಡ್ಕರ್ ವಿಚಾರದಾರೆಗೆ ಬಲ ಕೊಡುವ ಕೆಲಸ ಮಾಡಿದ್ದು ಬಿಜೆಪಿ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಅನಂತ್ ಕುಮಾರ್ ಹೆಗಡೆ ಹಿಂದೆ ಸಚಿವರಿದ್ದಾಗ ಹೇಳಿಕೆ ನೀಡಿದ್ದಕ್ಕೆ ಮೋದಿ ಅವರನ್ನು ಕರೆಸಿ ಸದನದಲ್ಲಿ ಕ್ಷಮೆ ಕೇಳಿಸಿದ್ದರು. ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಶಾಸ್ತಿಯನ್ನೂ ಮಾಡಲಾಯ್ತು. ಬಿಜೆಪಿ 400+ ಸೀಟು ಗೆಲ್ಲಬೇಕು ಎಂಬ ಉದ್ದೇಶ ಇದೆ. ಆದರೆ, ಹಡೆಗೆ ನೀಡಿದ ಹೇಳಿಕೆ ಅವರ ವೈಯಕ್ತಿಕ ವಿಚಾರವಾಗಿದೆಯೇ ಹೊರತು, ಪಕ್ಷಕ್ಕೆ ಸಂಬಂಧ ಇಲ್ಲ ಎಂದರು.
ಬಿಜೆಪಿ ಎಂದೂ ಅಂಬೇಡ್ಕರ್ ಅವರ ಸಂವಿಧಾನ ಬದಲಿಸುವ ಮಾತನ್ನು ಹೇಳಿಲ್ಲ. ಪ್ರಧಾನಿ ನೂರಾರು ಬಾರಿ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಇಲ್ಲ ಅಂತ ಹೇಳಿದ್ದಾರೆ. ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದಲೇ ನಾನು ಪ್ರಧಾನಿ ಆಗಿದ್ದೇನೆ ಅಂತ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅನಂತ್ ಕುಮಾರ್ ಹೆಗಡೆ ಅವರಿಗೆ ಸ್ಥಿಮಿತ ಕಳೆದುಕೊಂಡಂತಿದೆ. ಚುನಾವಣೆ ಬಂದಾಗ ಈ ರೀತಿ ಹೇಳಿಕೆ ಸರಿಯಲ್ಲ. ವಿಪಕ್ಷಗಳಿಗೆ ಆಹಾರ ಕೊಟ್ಟಂತಾಗಲಿದೆ. ಅವರ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ ಎಂದರು.
ಬೆಂಗಳೂರಿನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಅವರ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ. ಕೇಂದ್ರದಿಂದ ಸ್ಪಷ್ಟನೆ ಕೇಳಿ ಕ್ರಮ ಆಗಲಿದೆ. ಕಾಂಗ್ರೆಸ್ ಮುಖಂಡ ಪ್ರಧಾನಿ ಅವರಿಗೆ ಅವಮಾನಕರ ಹೇಳಿಕೆ ನೀಡಿದ್ದಾನೆ. ನಮ್ಮ ಪಕ್ಷದಲ್ಲಿ ಈ ರೀತಿ ಹೇಳಿಕೆ ನೀಡಿದರೆ ತಕ್ಷಣ ಕ್ರಮ ಆಗುತ್ತದೆ. ಕಾಂಗ್ರೆಸ್ ಕಾರ್ಯಕರ್ತ ಇಷ್ಟು ಕೆಟ್ಟದಾಗಿ ಹೇಳಿಕೆ ನೀಡಿದಾಗ ಪಕ್ಷದ ನಾಯಕರು ತಿಳಿ ಹೇಳಬೇಕು. ಆ ಕೆಲಸ ಕಾಂಗ್ರೆಸ್ ನಾಯಕರು ಯಾರೂ ಮಾಡಿಲ್ಲ. ಖರ್ಗೆ ಅವರೂ ವೈಯಕ್ತಿಕವಾಗಿ ಇದನ್ನು ಇಷ್ಟ ಪಡುವುದಿಲ್ಲ ಅಂತ ಭಾವಿಸಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ