ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಗೆ ಕತ್ತರಿ: ಇಂದಿರಾ ಆಹಾರ ಕಿಟ್ ಭಾಗ್ಯ, ಏನೆಲ್ಲಾ ಇರುತ್ತೆ?

ಅನ್ನಭಾಗ್ಯ ಯೋಜನೆಯಡಿ ಇಂದಿರಾ ಆಹಾರ ಕಿಟ್ ವಿತರಣೆಗೆ ಇಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಇನ್ನು ಮುಂದೆ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು ಪೌಷ್ಟಿಕ ಆಹಾರ ಕಿಟ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಹಾಗಾದರೆ ಈ ಕಿಟ್​​ನಲ್ಲಿ ಏನೆಲ್ಲಾ ಇರುತ್ತೆ ಎಂಬ ಮಾಹಿತಿ ಇಲ್ಲಿದೆ.

ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಗೆ ಕತ್ತರಿ: ಇಂದಿರಾ ಆಹಾರ ಕಿಟ್ ಭಾಗ್ಯ, ಏನೆಲ್ಲಾ ಇರುತ್ತೆ?
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2025 | 3:44 PM

ಬೆಂಗಳೂರು, ಅಕ್ಟೋಬರ್​ 09: ಉಚಿತ ಅನ್ನಭಾಗ್ಯ ಯೋಜನೆ ಮೂಲಕ ಮನೆಮಾತಾಗಿರುವ ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆಯಡಿ (anna bhagya) ಬಿಪಿಎಲ್​ ಕಾರ್ಡ್​ ಫಲಾನುಭವಿಗಳಿಗೆ ಇಂದಿರಾ ಕಿಟ್​ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಇಂದಿನ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆ ಮೂಲಕ ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲು ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮುಂಚೆ ಅಕ್ಕಿಯ ಅಭಾವ ಹಿನ್ನಲೆ  ಫಲಾನುಭವಿಗಳ ಖಾತೆಗೆ 175 ರೂ ಜಮಾ ಮಾಡಲಾಗುತ್ತಿತ್ತು.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್​ಐಆರ್

ಅಕ್ಕಿಯ ದರ ಇಳಿಕೆ ಆದ ಬಳಿಕ ಕಳೆದ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇಂದಿರಾ ಕಿಟ್​ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಇಂದಿರಾ ಆಹಾರ ಕಿಟ್​ನಲ್ಲಿ ಏನೇನು ಇರಲಿದೆ 

ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲು ಆಹಾರ ಧಾನ್ಯಗಳ ವಿತರಣೆ ಮುಂದಾಗಿದೆ. ಇಂದಿರಾ ಆಹಾರ ಕಿಟ್​ನಲ್ಲಿ ತೊಗರಿಬೆಳೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಕ್ಕರೆ ವಿತರಿಸಲು ನಿರ್ಧರಿಸಲಾಗಿದೆ. ಅನ್ನಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಹಿನ್ನೆಲೆ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ಪ್ರಮುಖ ನಿರ್ಧಾರಗಳು

  • 2025-26ನೇ ಸಾಲಿನ ರಸಗೊಬ್ಬರ ದಾಸ್ತಾನಿಗೆ 200 ಕೋಟಿ ರೂ. ಸಾಲಕ್ಕೆ ಬಂಡವಾಳ ಖಾತ್ರಿ ನೀಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಯಿ ಹೆಚ್ಚುವರಿ 15 ಯೋಜನೆಗಳು 15 ತಾಲೂಕುಗಳಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
  • ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ದೊರೆತಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ರೇಷನ್ ಅಕ್ಕಿಗೆ ಕನ್ನ; ಖಡಕ್ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆ

  • 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನವೆಂಬರ್ ತನಕ ಅವಧಿ ವಿಸ್ತರಣೆ.
  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ರೂ.405.55 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025 ಅನುಮೋದನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:40 pm, Thu, 9 October 25