AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್​ಐಆರ್

ಅದು ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ. ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯ ಅಕ್ಕಿ, ಕೊಪ್ಪಳ ಜಿಲ್ಲೆ ಗಂಗಾವತಿಯ ಕನಕಗಿರಿ ರಸ್ತೆಯ ಎಪಿಎಂಸಿ ಗೋದಾಮಿನಿಂದಲೇ ವಿದೇಶಕ್ಕೆ ಕಳ್ಳ ಸಾಗಣೆ ಆಗುತ್ತಿರುವ ಆರೋಪ ಕೇಳಿ ಬಂದಿದೆ. ಸದ್ಯ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತಿರುವ ಅಧಿಕಾರಿಗಳು ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್​ಐಆರ್
ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿರುವುದು
ಶಿವಕುಮಾರ್ ಪತ್ತಾರ್
| Updated By: Ganapathi Sharma|

Updated on: Aug 27, 2025 | 6:48 AM

Share

ಕೊಪ್ಪಳ, ಆಗಸ್ಟ್ 27: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ (Anna Bhagya Rice)  ಯೋಜನೆಯ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಸರ್ಕಾರಿ ಗೋದಾಮಿನಲ್ಲಿದ್ದ ಅಕ್ಕಿಯನ್ನು ‘ಲಾಲ್’ ಹೆಸರಿನ ಬ್ರ್ಯಾಂಡ್​ನ ಚೀಲಕ್ಕೆ ತುಂಬುತ್ತಿದ್ದ ಮಾಹಿತಿ ತಿಳಿದು ಕೆಲ ಸಂಘಟನೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ದುಬೈ ವಿಳಾಸ ಇರುವ, 25 ಕೆಜಿ ಸಾಮರ್ಥ್ಯದ ಸಾವಿರಾರು ಚೀಲಗಳಲ್ಲಿ ಅಕ್ಕಿ ತುಂಬುತ್ತಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಗಂಗಾವತಿ ತಹಸೀಲ್ದಾರ್ ರವಿ ಅಂಗಡಿ ಹಾಗೂ ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ತಡರಾತ್ರಿ ವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಟಿವಿ9 ವರದಿ ಬೆನ್ನಲ್ಲೇ ಪೊಲೀಸರು ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಸರ್ಕಾರಿ ಗೋದಾಮಿನ ಕಿರಿಯ ಸಹಾಯಕ ಸೋಮಶೇಖರ್​​ನನ್ನು ಅಮಾನತು ಮಾಡಿದ್ದಾರೆ.

ಏನಿದು ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಪ್ರಕರಣ?

ರಾಯಚೂರ ರಸ್ತೆಯ ವಿದ್ಯಾನಗರದಲ್ಲಿನ ಗೌರಿ ಶಂಕರ ರೈಸ್ ಮಿಲ್​ನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದು ಎನ್ನಲಾದ 168 ಕ್ವಿಂಟಾಲ್ ಅಕ್ಕಿಯನ್ನು ಕಳೆದ 2022 ರಲ್ಲಿ ಅಧಿಕಾರಿಗಳು ದಾಳಿ ಮಾಡಿ, ವಶ ಪಡಿಸಿಕೊಂಡಿದ್ದರು. ವಶಪಡಿಸಿಕೊಂಡಿರುವ ಅಕ್ಕಿಯನ್ನು ಅಧಿಕಾರಿಗಳು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹ ಮಾಡಿ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ವೇಳೆ ಅಧಿಕಾರಿಗಳು ಸರಿಯಾಗಿ ದಾಖಲೆ ನೀಡಿದ ಕಾರಣ ವಶಪಡಿಸಿಕೊಂಡಿರುವ ಅಕ್ಕಿಯನ್ನು ವಾಪಸ್ ನೀಡಲು ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಈ ಹಿನ್ನೆಲೆ 2022 ರಲ್ಲಿ ಜಪ್ತಿ ಮಾಡಿದ 168 ಕ್ವಿಂಟಲ್ ಅಕ್ಕಿಯನ್ನು ರೈಸ್ ಮಿಲ್​ನವರು ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದರು ಎಂದು ಅಕ್ಕಿ ಸಾಗಾಟ ಮಾಡಲು ಮುಂದಾಗಿದ್ದ ಲಾರಿಗಳ ಜತೆ ಇದ್ದವರು ಹೇಳಿದ್ದರು.

ಆದರೆ, ವಾಸ್ತವದಲ್ಲಿ ಸುಮಾರು 275 ಕ್ವಿಂಟಲ್​ಗೂ ಹೆಚ್ಚು ಅಕ್ಕಿ ಸಾಗಣೆಗೆ ತಯಾರಿ ನಡೆದಿದೆ. ವಿದೇಶದ ವಿಳಾಸ ಇರುವ ಚೀಲಕ್ಕೆ ಡಂಪ್ ಮಾಡಿ ಸಾಗಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಶಾಮೀಲಾಗಿ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಪ್ರಕರಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರೇ ಬೆಳಕಿಗೆ ತಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಸದಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ, ಬೆಚ್ಚಿಬಿದ್ದ ಎಲೆಕ್ಟ್ರಾನಿಕ್ ಸಿಟಿ ಜನ

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ವಾಸ್ತವದ ಮಾಹಿತಿ ನೀಡಬೇಕಾದ ಗೋದಾಮ್ ವ್ಯವಸ್ಥಾಪಕರು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಗಂಗಾವತಿ ತಹಶೀಲ್ದಾರ, ಆಹಾರ ನಿರೀಕ್ಷಕರು, ಪೊಲೀಸ್ ಇಲಾಖೆ ಅಧಿಕಾರಿಗಳು ಅಕ್ಕಿ ಲೋಡ್ ಮಾಡಿರುವ ಲಾರಿಗಳು ಹಾಗೂ ಸರ್ಕಾರಿ ಗೋದಾಮನ್ನು ಸೀಜ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ