ವಿಧಾನಸಭೆಯಲ್ಲೂ ಸದ್ದು ಮಾಡಿದ ಸೈಬರ್ ಕ್ರೈಂ: ಗೃಹ ಸಚಿವ ಪರಮೇಶ್ವರ್ ಕೊಟ್ರು ಆಘಾತಕಾರಿ ಮಾಹಿತಿ
ಸೈಬರ್ ಕ್ರೈಂ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗುತ್ತಿದೆ ಎಂಬುದು ವಿಧಾನಸಭೆ ಅಧಿವೇಶನದಲ್ಲೂ ಮಂಗಳವಾರ ಚರ್ಚೆಗೆ ಗ್ರಾಸವಾಯಿತು. ಈ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಂಕಿಅಂಶಗಳನ್ನು ನೀಡಿ, ಸೈಬರ್ ಅಪರಾಧಗಳ ತಡೆಗೆ ಮತ್ತು ಅಪರಾಧಿಗಳನ್ನು ಮಟ್ಟಹಾಕಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

ಬೆಳಗಾವಿ, ಡಿಸೆಂಬರ್ 10: ಪ್ರತಿದಿನ ಸಹಸ್ರಾರು ಜನ ಸೈಬರ್ ವಂಚನೆಗೆ (Cyber Fraud) ತುತ್ತಾಗುತ್ತಿದ್ದು, ಮಂಗಳವಾರ ಇದೇ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಬಿಜೆಪಿ ಶಾಸಕ ಸಿಮೆಂಟ್ ಮಂಜು ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಪರಮೇಶ್ವರ್, ದೇಶ-ವಿದೇಶಗಳಲ್ಲಿ ಇಂದು ಆನ್‌ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ. ಕಳ್ಳತನ, ಸುಲಿಗೆ, ದರೋಡೆ, ಡಕಾಯಿತಿ ಪ್ರಕರಣಗಳಿಗಿಂತ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕರ್ನಾಟಕದಲ್ಲಿ 2023 ರ ನವೆಂಬರ್ 15 ರಿಂದ ಈವರೆಗೆ 57,733 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 5,474 ಕೋಟಿ ರೂ. ವಂಚನೆ ಎಸಗಲಾಗಿದೆ. ಈ ಪೈಕಿ, 10,717 ಪ್ರಕರಣಗಳನ್ನು ಪತ್ತೆ ಹಚ್ಚಿ 627 ಕೋಟಿ ರೂ. ವಸೂಲು ಮಾಡಲಾಗಿದೆ ಎಂದು ತಿಳಿಸಿದರು.
ಆನ್‌ಲೈನ್ ಗೇಮಿಂಗ್ ನಿಷೇಧದ ಬಗ್ಗೆ ಸಚಿವರು ಹೇಳಿದ್ದೇನು?
ಆನ್‌ಲೈನ್ ಗೇಮ್ಸ್ ನಿರ್ಬಂಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಾಂತ್ರಿಕ ಅಂಶಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದರ ವಿರುದ್ಧ ಇಂಡಿಯನ್ ಗೇಮಿಂಗ್ ಫೆಡರೇಷನ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದೇ 19ಕ್ಕೆ ವಿಚಾರಣೆಗೆ ಬರಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಸೈಬರ್ ಅಪರಾಧ ಸಂಭವಿಸಿದಾಗ ತುರ್ತಾಗಿ ತಡೆಯಲು, ಗೃಹ ಇಲಾಖೆಯಿಂದಲೇ ಸಹಾಯವಾಣಿ ಆರಂಭಿಸಬೇಕು ಎಂಬ ಸಿಮೆಂಟ್ ಮಂಜು ಒತ್ತಾಯಕ್ಕೆ ಉತ್ತರಿಸಿದ ಪರಮೇಶ್ವರ್, ಈಗಾಗಲೇ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕವಾಗಿ ಡಿಜಿಪಿ ಶ್ರೇಣಿ ಅಧಿಕಾರಿಯ ನೇತೃತ್ವದಲ್ಲಿ ವಿಭಾಗವನ್ನೇ ರಚಿಸಿರುವುದು ದೇಶದಲ್ಲೇ ಪ್ರಥಮವೆನಿಸಿದೆ. ರಾಜ್ಯದಲ್ಲಿ 43 ಸೈಬರ್ ಅಪರಾಧ ತನಿಖಾ ಠಾಣೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರಿಂದಲೇ ಅಸಮಾಧಾನ, ಶಾಸಕಾಂಗ ಸಭೆಯ ಇನ್ಸೈಡ್ ಮಾಹಿತಿ ಇಲ್ಲಿದೆ
ಅದೇನೆ ಇರಲಿ, ಇವತ್ತು ಮೊಬೈಲ್ ಇಲ್ಲದೆ ಏನೂ ಇಲ್ಲ. ವ್ಯಾಪಾರ, ವಹಿವಾಟು ಸೇರಿ ಬಹುತೇಕ ಹಣಕಾಸು ವ್ಯವಹಾರಗಳನ್ನು ಆನ್‌ಲೈನ್‌ನಲ್ಲೇ ನಡೆಸಲಾಗುತ್ತದೆ. ಹೀಗಿರುವಾಗ ಸೈಬರ್ ಕ್ರೈಂ ಕೂಡ ಪೆಡಂಭೂತದಂತೆ ಕಾಡುತ್ತಿದೆ. ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Wed, 10 December 25



