ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಬಹುತೇಕ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿವೆ. ದೆಹಲಿ, ಪುಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ, ವಾರಾಂತ್ಯದ ಲಾಕ್ಡೌನ್ನಂತಹ ಕ್ರಮಗಳು ಜಾರಿಯಾಗಿವೆ. ಕರ್ನಾಟಕದಲ್ಲೂ ಇಂತಹದ್ದೇ ಕಠಿಣ ನಿಯಮಾವಳಿಗಳು ಜಾರಿಯಾಗಬಹುದು ಎಂಬ ವದಂತಿ ಹಬ್ಬಿದ್ದು, ಇದರಿಂದ ಭಯಭೀತರಾದ ಹೊರರಾಜ್ಯದ ಜನರು ಬೆಂಗಳೂರು ತೊರೆದು ತವರು ರಾಜ್ಯಗಳಿಗೆ ವಾಪಾಸ್ಸಾಗುತ್ತಿದ್ದಾರೆ.
ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಸರ್ಕಾರ ದಿನಕ್ಕೊಂದು ಕಾನೂನು ರೂಪಿಸುತ್ತಿದೆ. ಇನ್ನೊಂದೆಡೆ ಸಾರಿಗೆ ನೌಕರರ ಮುಷ್ಕರವೂ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಲಾಕ್ಡೌನ್ ಆಗುವುದು ಖಚಿತ ಎಂಬ ವದಂತಿ ಹಬ್ಬಿದೆ. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಾಗಲೇ ಕಷ್ಟ ಅನುಭವಿಸಿರುವ ಜನರು ಈಗ ಮತ್ತೆ ಲಾಕ್ಡೌನ್ ಆಗಬಹುದೆಂದು ಹೆದರಿ ತಮ್ಮ ತವರಿಗೆ ಮರಳುತ್ತಿದ್ದಾರೆ.
ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ, ಬಿಹಾರ, ಕೋಲ್ಕತ್ತಾ ರಾಜ್ಯಗಳಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಕೂಲಿ ಕಾರ್ಮಿಕರು ಸಿಕ್ಕ ಸಿಕ್ಕ ಬಸ್, ರೈಲುಗಳನ್ನೇರಿ ಹೊರಡುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶ, ರಾಜಸ್ಥಾನ, ಕೊಲ್ಕತ್ತಾ ಭಾಗಕ್ಕೆ ಹೊರಡುವ ರೈಲುಗಳು ತುಂಬಿ ತುಳುಕಾಡುತ್ತಿದ್ದು, ಮತ್ತೆ ಲಾಕ್ಡೌನ್ ಮಾಡುವ ಮೊದಲು ಊರು ಸೇರಿಕೊಳ್ಳುತ್ತೇವೆ ಎಂದು ಹೇಳುತ್ತಾ ಗುಳೆ ಹೊರಟಿದ್ದಾರೆ.
ಇದನ್ನೂ ಓದಿ:
ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯ ಲಾಕ್ಡೌನ್ ಘೋಷಣೆ
ಬಾಂಗ್ಲಾದೇಶದಲ್ಲಿ ಏಪ್ರಿಲ್ 1ರಿಂದ ಏಳು ದಿನಗಳ ಲಾಕ್ಡೌನ್ ಘೋಷಣೆ
(Daily wage workers from outer states returning to their home due to the fear of Lockdown in Karnataka)