ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿದ ಯುವತಿಯಿಂದ ತಪ್ಪೊಪ್ಪಿಗೆ ಕಾಣಿಕೆ
ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮರೆದ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಹಾಕಲಾಗಿದೆ. ತೀರ್ಥ ಸ್ನಾನ ಮಾಡಿ ತಪ್ಪು ಕಾಣಿಕೆ ಹಾಕಿದ ಬೆಂಗಳೂರು ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ.
ಮಂಗಳೂರು: ಸಾಮಾಜಿಕ ಜಾಲತಾಣ ಹೆಚ್ಚು ಅಪ್ಡೇಟ್ ಆದಂತೆ ನೆಟ್ಟಿಗರು ಹೆಚ್ಚೆಚ್ಚು ಅದರಲ್ಲಿ ತೊಡಗಿಕೊಳ್ಳುತ್ತಾರೆ. ಸದ್ಯ ಒಂದಷ್ಟು ಮಂದಿ ರೀಲ್ಸ್ ಮಾಡುವುದರಲ್ಲಿ ತೊಡಗಿಕೊಂಡು ಲೈಕ್ ಮತ್ತು ಫೇಮಸ್ ಆಗಲು ಮುಂದಾಗುತ್ತಿದ್ದಾರೆ. ಇವರ ಈ ದುರಾಸೆ ಕೆಲವೊಮ್ಮೆ ಮತ್ತೊಬ್ಬರ ನಂಬಿಕೆಗೆ ಘಾಸಿ ಉಂಟು ಮಾಡುತ್ತದೆ. ಅದರಂತೆ ಯುವತಿಯೊಬ್ಬಳು ಕಾಂತಾರ ಸಿನಿಮಾ ನೋಡಿದ ನಂತರ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದಳು. ಇದು ದೈವ ಭಕ್ತರನ್ನು ಕೆರಳಿಸಿತ್ತು. ಸದ್ಯ ತನ್ನ ತಪ್ಪಿನ ಅರಿವಾದ ಹಿನ್ನೆಲೆ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಆಗಮಿಸಿದ ಯುವತಿ ತೀರ್ಥ ಸ್ನಾನ ಮಾಡಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ.
ಪಂಜುರ್ಲಿ ದೈವದ ಬಗ್ಗೆ ರೀಲ್ಸ್ ಮಾಡಿದ್ದ ಬೆಂಗಳೂರು ಮೂಲದ ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿಗೆ ತಪ್ಪಿನ ಅರಿವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಬಳಿ ಬಂದು ಮುಂದೇ ಯಾವುದೇ ತೊಂದರೆ ಆಗದಿರಲಿ ಎಂದು ತಪ್ಪು ಕಾಣಿಕೆ ಹಾಕಿದ್ದಾಳೆ. ತೀರ್ಥ ಸ್ನಾನ ಮಾಡಿ ತಪ್ಪು ಕಾಣಿಕೆ ಹಾಕಿದ ಶ್ವೇತಾ, ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದಿದ್ದಾಳೆ. ಅಲ್ಲದೆ ಯಕ್ಷಗಾನ ಇದೆಲ್ಲವೂ ಒಂದೇ ಎಂದು ಅಂದುಕೊಂಡಿದ್ದೆ. ಇದೀಗ ನನಗೆ ಇವೆರೆಡು ಬೇರೆ-ಬೇರೆ ಅಂತ ತಿಳಿಯಿತು. ದೈವದ ಕೋಲ ನೋಡುವ ಅವಕಾಶ ಸಿಕ್ಕರೆ ನೋಡುತ್ತೇನೆ ಎಂದು ಹೇಳಿದ್ದಾಳೆ.
ಕಾಂತಾರ ಸಿನಿಮಾ ನೋಡಿದ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದ ವೇಷಭೂಷಣ ಹಾಕಿ ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದಳು. ನಂತರ ಇದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ವಿಡಿಯೋ ನೋಡಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ವ್ಯಾಪಕ ಟೀಕೆಗೆ ಗುರಿಯಾದ ನಂತರ ಎಚ್ಚೆತ್ತ ಶ್ವೇತಾ ರೆಡ್ಡಿ ಕ್ಷಮೆ ಕೋರಿ ವಿಡಿಯೋ ಡಿಲಿಟ್ ಮಾಡಿದ್ದಳು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ