Vittal Malekudiya: ವಿಠಲ್ ಮಲೆಕುಡಿಯ ನಕ್ಸಲ್ ನಂಟಿನ ಆರೋಪದಿಂದ ಮುಕ್ತ; 9 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ

| Updated By: ಸುಷ್ಮಾ ಚಕ್ರೆ

Updated on: Oct 21, 2021 | 4:20 PM

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಯಾದ ವಿಠಲ ಮಲೆಕುಡಿಯ ಮತ್ತು ಅವರ ತಂದೆಯನ್ನು 2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ನಕ್ಸಲ್ ನಂಟಿನ ಆರೋಪದಲ್ಲಿ ಬಂಧಿಸಲಾಗಿತ್ತು. ಅವರಿಬ್ಬರೂ ನಿರಪರಾಧಿಗಳು ಎಂದು ಕೋರ್ಟ್ ಇದೀಗ ತೀರ್ಪು ನೀಡಿದೆ.

Vittal Malekudiya: ವಿಠಲ್ ಮಲೆಕುಡಿಯ ನಕ್ಸಲ್ ನಂಟಿನ ಆರೋಪದಿಂದ ಮುಕ್ತ; 9 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ
ವಿಠಲ್ ಮಲೆಕುಡಿಯ
Follow us on

ಮಂಗಳೂರು: 2012ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ (Mangaluru University) ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾಗಿದ್ದ ವಿಠಲ್ ಮಲೆಕುಡಿಯ (Vittal Malekudiya) ಅವರಿಗೆ ನಕ್ಸಲ್ ನಂಟು ಇದೆ ಎಂದು ಬಂಧಿಸಲಾಗಿತ್ತು. 9 ವರ್ಷಗಳ ಹಿಂದಿನ ಆ ಪ್ರಕರಣದ ಅಂತಿಮ ತೀರ್ಪನ್ನು ಪ್ರಕಟಿಸಿರುವ ನ್ಯಾಯಾಲಯ ನಕ್ಸಲ್ ನಂಟಿನ (Naxal Link) ಆರೋಪದಿಂದ ವಿಠಲ್ ಮಲೆಕುಡಿಯ ಮತ್ತು ಆತನ ತಂದೆಯನ್ನು ಮುಕ್ತಗೊಳಿಸಿದೆ. ವಿಠಲ್ ಮಲೆಕುಡಿಯ ಅವರನ್ನು ನಕ್ಸಲ್ ನಂಟಿನ ಆರೋಪದಿಂದ ಮುಕ್ತಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಮಂಗಳೂರಿನಲ್ಲಿರೋ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಇಂದು ತೀರ್ಪು ಹೊರಬಿದ್ದಿದ್ದು, 9 ವರ್ಷಗಳ ಬಳಿಕ ಅಂತಿಮ ತೀರ್ಪು ಪ್ರಕಟಿಸಲಾಗಿದೆ. ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದ್ದ ನಕ್ಸಲ್ ನಂಟಿನ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ 2012ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. 2012ರ ಮಾರ್ಚ್ 03ರಂದು ನಕ್ಸಲ್ ನಿಗ್ರಹ ಪಡೆಯಿಂದ ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು ಬಂಧಿಸಲಾಗಿತ್ತು.

ವಿಠಲ್ ಮನೆಗೆ ದಾಳಿ ನಡೆಸಿದ್ದ ವೇಳೆ ಚುನಾವಣೆ ಬಹಿಷ್ಕಾರದ ಕರಪತ್ರ, ಭಗತ್ ಸಿಂಗ್ ಪುಸ್ತಕ, ನಕ್ಸಲ್ ಬರಹದ ಪತ್ರಿಕಾ ಕಟ್ಟಿಂಗ್ ಗಳು ಪತ್ತೆಯಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿಗಳನ್ನ ಒಕ್ಕಲೆಬ್ಬಿಸುವುದರ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಠಲ್ ಮಲೆಕುಡಿಯ ಅವರಿಗೆ ನಕ್ಸಲ್ ನಂಟಿದೆ ಎಂದು ಬಂಧಿಸಿದ್ದ ನಕ್ಸಲ್ ನಿಗ್ರಹ ಪಡೆ ವೇಣೂರು ಪೊಲೀಸರಿಗೆ ಒಪ್ಪಿಸಿತ್ತು.

ವಿಠಲ್ ಬಂಧನವಾದಾಗ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸೇರಿ ಕಮ್ಯುನಿಸ್ಟ್ ರಾಷ್ಟ್ರೀಯ ನಾಯಕರು ಮಂಗಳೂರು ಜೈಲಿಗೆ ಭೇಟಿ ನೀಡಿದ್ದರು. ಇಡೀ ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಿದೆ.

ಇದನ್ನೂ ಓದಿ: ‘ನಕ್ಸಲ್ ಅಂಕಲ್.. ಪ್ಲೀಸ್ ನನ್ನ ಅಪ್ಪನನ್ನು ಬಿಟ್ಟುಬಿಡಿ’- ನಾಪತ್ತೆಯಾದ ಯೋಧ ರಾಕೇಶ್ವರ್ ಸಿಂಗ್​ರ 5ವರ್ಷದ ಮಗಳಿಂದ ಮನವಿ.. ಕಣ್ಣೀರು

ಶರಣಾಗಿದ್ದ ನಕ್ಸಲ್ ಮಹಿಳೆ ಪೊಲೀಸ್ ಮೆಸ್​ನಲ್ಲಿ ಅನುಮಾನಾಸ್ಪದವಾಗಿ ಸಾವು; ಆತ್ಮಹತ್ಯೆಯ ಶಂಕೆ

Published On - 4:19 pm, Thu, 21 October 21