ಶರಣಾಗಿದ್ದ ನಕ್ಸಲ್ ಮಹಿಳೆ ಪೊಲೀಸ್ ಮೆಸ್ನಲ್ಲಿ ಅನುಮಾನಾಸ್ಪದವಾಗಿ ಸಾವು; ಆತ್ಮಹತ್ಯೆಯ ಶಂಕೆ
ಮಧ್ಯಾಹ್ನ 3.30ರ ಸುಮಾರಿಗೆ ಪಾಂಡೆ ಕವಾಸಿ ಬಾತ್ರೂಂಗೆ ತೆರಳಿದ್ದಾರೆ. ಬಳಿಕ, ಸುಮಾರು ಸಮಯದ ನಂತರವೂ ಅವರು ಹೊರಬರಲಿಲ್ಲ. ಹಾಗಾಗಿ, ಕಾನ್ಸ್ಟೇಬಲ್ಗಳು ಪರಿಶೀಲನೆ ನಡೆಸಲು ಬಾತ್ರೂಂಗೆ ಹೋಗಿದ್ದಾರೆ. ಅಲ್ಲಿ ಪಾಂಡೆ ಕವಾಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಛತ್ತೀಸ್ಗಡ: ವಾರದ ಹಿಂದೆ ಶರಣಾಗತಿ ಹೇಳಿದ್ದ 20 ವರ್ಷ ಪ್ರಾಯದ ನಕ್ಸಲ್ ಮಹಿಳೆ ಮಂಗಳವಾರ (ಫೆ. 23) ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಛತ್ತೀಸ್ಗಡದ ದಂತೇವಾಡದಲ್ಲಿ ಪೊಲೀಸ್ ಇಲಾಖೆ ನಡೆಸುತ್ತಿರುವ ಮೆಸ್ನಲ್ಲಿ ನಕ್ಸಲ್ ಮಹಿಳೆ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಾಂಡೆ ಕವಾಸಿ ಎಂಬಾಕೆ ಜಿಲ್ಲಾ ರಿಸರ್ವ್ ಗಾರ್ಡ್ (DRG) ಅತಿಥಿ ಗೃಹದ ವಾಶ್ ರೂಂನಲ್ಲಿ ನೇಣು ಹಾಕಿಕೊಂಡು, ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಸ್.ಪಿ. ಅಭಿಷೇಕ್ ಪಲ್ಲವ ಮಾಹಿತಿ ನೀಡಿದ್ದಾರೆ.
ಪಾಂಡೆ ಕವಾಸಿ ಎಂಬವರು ಶರಣಾಗತಿ ಸೂಚಿಸಿದ್ದ ಮತ್ತೋರ್ವ ನಕ್ಸಲ್ ಮಹಿಳೆಯ ಜತೆಗೆ ಪೊಲೀಸ್ ಅತಿಥಿ ಗೃಹದಲ್ಲಿದ್ದರು. ಮಾವೊವಾದಿ ಚೇತನಾ ನಾಟ್ಯ ಮಂಡಳಿಯ ಸದಸ್ಯರೂ ಆಗಿದ್ದ ಕವಾಸಿ, ಫೆಬ್ರವರಿ 19ರಂದು ಶರಣಾಗತಿ ಸೂಚಿಸಿದ್ದರು.
ಹಳೆಯ ನಕ್ಸಲ್ ಗೆಳೆಯರಿಂದ ಬೆದರಿಕೆಗೆ ಬೆದರಿದ ಮಹಿಳೆ: ಇಬ್ಬರು ಮಹಿಳೆಯರು ಶರಣಾಗತಿ ಸೂಚಿಸಿದ ಕಾರಣ ಹಳೆಯ ನಕ್ಸಲ್ ಗೆಳೆಯರು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿತ್ತು. ಶರಣಾಗಿರುವ ನಕ್ಸಲ್ ಮಹಿಳೆಯರ ಜತೆಗೆ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳನ್ನು ಕೂಡ ನಿಯೋಜಿಸಲಾಗಿತ್ತು.
ಮಧ್ಯಾಹ್ನ 3.30ರ ಸುಮಾರಿಗೆ ಪಾಂಡೆ ಕವಾಸಿ ಬಾತ್ರೂಂಗೆ ತೆರಳಿದ್ದಾರೆ. ಬಳಿಕ, ಸುಮಾರು ಸಮಯದ ನಂತರವೂ ಅವರು ಹೊರಬರಲಿಲ್ಲ. ಹಾಗಾಗಿ, ಕಾನ್ಸ್ಟೇಬಲ್ಗಳು ಪರಿಶೀಲನೆ ನಡೆಸಲು ಬಾತ್ರೂಂಗೆ ಹೋಗಿದ್ದಾರೆ. ಅಲ್ಲಿ ಪಾಂಡೆ ಕವಾಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ಇಂದು (ಫೆ.24) ನಡೆಯಲಿದೆ.
ಶರಣಾಗತಿ ಸೂಚಿಸಿದ್ದ ನಕ್ಸಲ್ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಲು ಅನುವು ಮಾಡಿಕೊಡುವಂತೆ ಎಸ್.ಪಿ. ಅಭಿಷೇಕ್ ಪಲ್ಲವ ದಂತೇವಾಡ ಕಲೆಕ್ಟರ್ ಬಳಿ ಕೇಳಿದ್ದಾರೆ. ಶರಣಾಗಿದ್ದ 20ವರ್ಷದ ನಕ್ಸಲ್ ಮಹಿಳೆಯ ಅನುಮಾನಾಸ್ಪದ ಆತ್ಮಹತ್ಯೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇದನ್ನೂ ಓದಿ: ‘ರಕ್ಷಾ ಬಂಧನ’ದಲ್ಲಿ ಸಿಲುಕಿ ಖಾಕಿಗೆ ಶರಣಾದ ನಕ್ಸಲ್, ಎಲ್ಲಿ?
ಮದ್ದೂರು ಪುರಸಭೆ ಅಧಿಕಾರಿಗಳ ಕಿರುಕುಳ ಆರೋಪ; ಡೆತ್ ನೋಟ್ ಬರೆದಿಟ್ಟು ಪೌರ ಕಾರ್ಮಿಕ ಆತ್ಮಹತ್ಯೆ
Published On - 11:22 am, Wed, 24 February 21