ಕೃಷಿ ಕಾಯ್ದೆಗಳ ಹಿಂಪಡೆಯದೇ ಹೋದರೆ ಪಾರ್ಲಿಮೆಂಟ್​ಗೆ ಘೇರಾವ್: ರಾಕೇಶ್ ಟಿಕಾಯತ್ ಎಚ್ಚರಿಕೆ

Farmers Protest: ಪಾರ್ಲಿಮೆಂಟ್ ಘೆರಾವ್​ಗೆ ಕರೆ ನೀಡಲಾಗುವುದು. ದೆಹಲಿ ಪಾದಯಾತ್ರೆ ಮಾಡಲಾಗುವುದು. ನಾಲ್ಕು ಲಕ್ಷ ಟ್ರ್ಯಾಕ್ಟರ್​ಗಳ ಬದಲಾಗಿ 40 ಲಕ್ಷ ಟ್ರ್ಯಾಕ್ಟರ್ ಚಳುವಳಿ ನಡೆಸಲಾಗುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ಹಿಂಪಡೆಯದೇ ಹೋದರೆ ಪಾರ್ಲಿಮೆಂಟ್​ಗೆ ಘೇರಾವ್: ರಾಕೇಶ್ ಟಿಕಾಯತ್ ಎಚ್ಚರಿಕೆ
ರಾಕೇಶ್ ಟಿಕಾಯತ್
Follow us
TV9 Web
| Updated By: ganapathi bhat

Updated on:Apr 06, 2022 | 7:43 PM

ದೆಹಲಿ: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ ರೈತ ಹೋರಾಟಗಾರರು ಪಾರ್ಲಿಮೆಂಟ್​ಗೆ ಘೇರಾವ್ (Gherao) ಹಾಕುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ (BKU) ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ‘ದೆಹಲಿ ಮಾರ್ಚ್​ಗೆ’ (Delhi March) ಯಾವಾಗಲಾದರೂ ಕರೆ ನೀಡಬಹುದು. ರೈತರು ತಯಾರಾಗಿರಬೇಕು ಎಂದು ಟಿಕಾಯತ್ ಹೇಳಿದ್ದಾರೆ. ರಾಜಸ್ಥಾನದ ಸಿಕರ್ ಎಂಬಲ್ಲಿ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಂಗಳವಾರ (ಫೆ.23) ರಾಕೇಶ್ ಟಿಕಾಯತ್ ಮಾತನಾಡಿದ್ದಾರೆ.

ಈ ಬಾರಿ ಪಾರ್ಲಿಮೆಂಟ್ ಘೇರಾವ್​ಗೆ ಕರೆ ನೀಡಲಾಗುವುದು. ದೆಹಲಿ ಪಾದಯಾತ್ರೆ ಮಾಡಲಾಗುವುದು. ನಾಲ್ಕು ಲಕ್ಷ ಟ್ರ್ಯಾಕ್ಟರ್​ಗಳ ಬದಲಾಗಿ 40 ಲಕ್ಷ ಟ್ರ್ಯಾಕ್ಟರ್ ಚಳುವಳಿ ನಡೆಸಲಾಗುತ್ತದೆ ಎಂದು ಕಿಸಾನ್ ಮಹಾಪಂಚಾಯತ್​ನಲ್ಲಿ ಟಿಕಾಯತ್ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಗೇಟ್ ಬಳಿಯ ಪಾರ್ಕ್​ನಲ್ಲಿ ನೇಗಿಲು ಹಿಡಿದು ನೆಲ ಉತ್ತು, ಬೆಳೆ ಬೆಳೆಯುತ್ತೇವೆ. ಯುನೈಟೆಡ್ ಫ್ರಂಟ್​ನ ರೈತ ಚಳುವಳಿಗಾರರು ಪಾರ್ಲಿಮೆಂಟ್ ಘೆರಾವ್​ಗೆ ದಿನಾಂಕ ನಿಗದಿ ಮಾಡುತ್ತಾರೆ ಎಂದು ಟಿಕಾಯತ್ ತಿಳಿಸಿದ್ದಾರೆ.

ಭಾರತದ ತ್ರಿವರ್ಣ ಧ್ವಜವನ್ನು ರೈತರು ಬಹಳ ಪ್ರೀತಿಸುತ್ತಾರೆ ಜನವರಿ 26ರಂದು ನಡೆದ ಟ್ರ್ಯಾಕ್ಟರ್ ಚಳುವಳಿಗೆ ಕೆಟ್ಟ ಹೆಸರು ತರುವಂತೆ ಷಡ್ಯಂತ್ರ ಹೂಡಲಾಗಿದೆ. ಜನವರಿ 26ರ ಹಿಂಸಾಚಾರವನ್ನು ರೈತರ ಮೇಲೆ ಹೊರಿಸಲಾಗುತ್ತಿದೆ. ಭಾರತದ ತ್ರಿವರ್ಣ ಧ್ವಜವನ್ನು ರೈತರು ಬಹಳ ಪ್ರೀತಿಸುತ್ತಾರೆ. ರೈತರು ರಾಜಕೀಯ ನಾಯಕರಂತಲ್ಲ ಎಂದು ಟಿಕಾಯತ್ ಗುಡುಗಿದ್ದಾರೆ.

ಕೇಂದ್ರ ಸರ್ಕಾರ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲೇಬೇಕು. ಕನಿಷ್ಠ ಬೆಂಬಲ ಬೆಲೆಯನ್ನು (MSP) ನೀಡಲೇಬೇಕು. ನೂತನ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ, ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಭರವಸೆ ನೀಡದೇ ಹೋದರೆ, ದೊಡ್ಡ ದೊಡ್ಡ ಕಂಪೆನಿಗಳ ಗೋದಾಮುಗಳನ್ನು ನಾಶಪಡಿಸುವುದಾಗಿ ಟಿಕಾಯತ್ ಎಚ್ಚರಿಸಿದ್ದಾರೆ.

ಕಿಸಾನ್ ಮಹಾಪಂಚಾಯತ್​ನಲ್ಲಿ ಸ್ವರಾಜ್ ಪಕ್ಷದ ನಾಯಕ ಯೋಗೇಂದ್ರ ಯಾದವ್, ಆಲ್ ಇಂಡಿಯಾ ಕಿಸಾನ್ ಸಭಾ ಉಪಾಧ್ಯಕ್ಷ ಆಮ್ರಾ ರಾಮ್, ಕಿಸಾನ್ ಯೂನಿಯನ್ ಮುಖ್ಯ ಕಾರ್ಯದರ್ಶಿ ಚೌಧರಿ ಯುಧ್ವೀರ್ ಸಿಂಗ್ ಹಾಗೂ ಇತರರು ಭಾಗವಹಿಸಿದ್ದಾರೆ.

ಪಂಜಾಬ್, ಹರ್ಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶ ಭಾಗದ ಸಾವಿರಾರು ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸಿಂಘು, ಟಿಕ್ರಿ ಹಾಗೂ ಘಾಜಿಪುರ್ ಭಾಗಗಳಲ್ಲಿ ಕಳೆದ 90 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆ (MSP) ನೀಡುವ ಬಗ್ಗೆ ಖಚಿತತೆ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಇದನ್ನೂ ಓದಿ: ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ

ಪ್ರತಿಭಟನಾ ಸ್ಥಳ ಖಾಲಿ ಮಾಡಿ ಎಂದು ಬ್ಯಾನರ್ ಹಚ್ಚಿದ ದೆಹಲಿ ಪೊಲೀಸರು; ರೈತ ಮುಖಂಡರ ಆಕ್ರೋಶ

Published On - 12:54 pm, Wed, 24 February 21