BS Yediyurappa: ‘ಹಣ, ಹೆಂಡದ ಬಲದಿಂದ ಕಾಂಗ್ರೆಸ್ ಪಕ್ಷ ದೇಶ ಆಳುತ್ತಿತ್ತು’; ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ
Karnataka By election: ಸಿಂದಗಿ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಪರ ಮತಯಾಚನೆ ಮಾಡುವಾಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ಅವರು ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ: ‘‘ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ದೇಶದ ಯಾವ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಇದೆ?’’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ತಾಂಬಾ ಗ್ರಾಮದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘‘ಕಾಂಗ್ರೆಸ್ ನಾಯಕ ಯಾರು ಎಂಬುದು ಅವರಿಗೇ ಗೊತ್ತಿಲ್ಲ. ಆ ಪಕ್ಷದಲ್ಲಿ ನಾಯಕತ್ವಕ್ಕಾಗಿ ಬಡಿದಾಡುತ್ತಿದ್ದಾರೆ. ಹಣ ಬಲ, ಹೆಂಡದ ಬಲದಿಂದ ಕಾಂಗ್ರೆಸ್ ದೇಶ ಆಳುತ್ತಿತ್ತು. ಮನೆಯಲ್ಲಿ ಹೆಣ್ಣು ಹುಟ್ಟಿದರೆ ಕಣ್ಣೀರು ಹಾಕುವ ಕಾಲವಿತ್ತು. ಗಾಂಧೀಜಿಯವರು ಕಟ್ಟಿದಂತಹ ಕಾಂಗ್ರೆಸ್ ಈಗ ಬದುಕಿಲ್ಲ’’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘‘ಇವತ್ತು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಅಕ್ಕಿ ಕೊಡುವ ಯೋಜನೆ ಮಾಡಿದ್ದು ಮೋದಿ ಅವರು. ಸಿದ್ದರಾಮಯ್ಯ ಹೇಳುವುದು ಏಳು ಕೇಜಿಯಿಂದ ಐದು ಕಜಿಗೆ ಇಳಿಸಿದ್ದಾರೆ ಎಂದು. ಏಳು ಕೆಜಿ ಕೊಟ್ಟಿದ್ದು ಮೋದಿ, ಐದು ಕೆಜಿ ಕೊಡುತ್ತಿರುವುದೂ ಮೋದಿ. ಕೊವಿಡ್ ಸಂದರ್ಭದಲ್ಲಿ ಹೆಚ್ಚುವರಿ ಅಕ್ಕಿ ಕೊಡುತ್ತಿರುವುದು ಕೂಡ ಮೋದಿ ಅವರೇ’’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು, ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡುವ ಯೋಜನೆ ನಮಗೆ ಇದೆ. ನಾನು ಹೇಳಿದ್ದ ಮಾತು ಸತ್ಯ ಎನಿಸಿದ್ರೆ 30ಕ್ಕೆ ಮತಗಟ್ಟೆಗೆ ಬಂದು ಮತ ನೀಡಿ. ಬಿಜೆಪಿ ಅಭ್ಯರ್ಥಿ ಗೆದ್ದರೆ ಕಾಂಗ್ರೆಸ್ಗೆ ಪಾಠ ಕಲಿಸಿದಂತಾಗುತ್ತದೆ. ಮೋದಿಜಿ ಅವರ ಕೈ ಬಲಪಡಿಸಿದಂತಾಗುತ್ತದೆ’’ ಎಂದು ಯಡಿಯೂರಪ್ಪ ಮತದಾರರಲ್ಲಿ ಕೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್ವೈ ತಿರುಗೇಟು: ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಎಸ್ವೈ, ಕೇಂದ್ರದಿಂದ ಎಷ್ಟು ಹಣ ತರಬೇಕೋ ಅದನ್ನು ತಂದಿದ್ದೀವಿ ಎಂದಿದ್ದಾರೆ. ಕರ್ನಾಟಕ ಬಿಜೆಪಿಗೆ ಧಮ್ ಇಲ್ಲವೆಂಬ ಹೇಳಿಕೆಗೆ ಟಾಂಗ್ ನೀಡಿದ ಯಡಿಯೂರಪ್ಪ, ‘‘ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಮಾತನಾಡಬಾರದು. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ. ಕೇಂದ್ರದ ಎಲ್ಲಾ ಸಚಿವರನ್ನು ಸಿಎಂ ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ತಂದ ಹಣಕ್ಕಿಂತ 10 ಪಟ್ಟು ಹೆಚ್ಚು ಹಣವನ್ನು ತರಲು ಸಿಎಂ ಬೊಮ್ಮಾಯಿ ಯತ್ನಿಸುತ್ತಿದ್ದಾರೆ’’ ಎಂದು ಯಡಿಯೂರಪ್ಪ ನುಡಿದಿದ್ದಾರೆ.
ಚುನಾವಣೆ ಗೆಲ್ಲಲು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಬಿಎಸ್ವೈ, ‘ಯಾರು ತಾನು ಕಳ್ಳ ಅವನು ಬೇರೆಯವನನ್ನ ನಂಬುವುದಿಲ್ಲ. ವಿನಾಕಾರಣ ಆರೋಪ ಮಾಡುವುದು ಶೋಭೆ ತರುವುದಿಲ್ಲ. ಯಾರು ಯಾರಿಗೆ ಹಣ ಕೊಡುತ್ತಿದ್ದಾರೆ ಅನ್ನೋದನ್ನ ಹೇಳಿ. ಸುಳ್ಳು ಆರೋಪದಿಂದ ಲಾಭ ಇಲ್ಲ. ಹಣ ಹಂಚಿ ಅಧಿಕಾರಕ್ಕೆ ಬಂದವರು ನೀವು. ಸೋಲು ನಿಶ್ಚಿತವಾಗಿರುವ ಕಾರಣ ಹೀಗೆ ಆರೋಪ ಮಾಡುತ್ತಿದ್ದಾರೆ’’ ಎಂದು ಕುಟುಕಿದ್ದಾರೆ.
ಪ್ರಚಾರ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಎಡವಟ್ಟು; ಸರಿಪಡಿಸಿದ ಬಿಎಸ್ವೈ: ಸಭೆಯನ್ನು ಉದ್ದೇಶಿಸಿ ಸಚಿವ ಎಂಟಿಬಿ ನಾಗರಾಜ್ ಭಾಷಣ ಮಾಡುವಾಗ ‘ಜನತಾ ಪಕ್ಷಕ್ಕೆ… ಜನತಾ ಪಕ್ಷಕ್ಕೆ..’ ಎಂದು ಹೇಳುತ್ತಿದ್ದರು. ಇದನ್ನು ಗಮನಿಸಿದ ಬಿಎಸ್ ಯಡಿಯೂರಪ್ಪ, ಅಸಮಾಧಾನದಿಂದ ಕೈ ತೋರಿಸಿದರು. ಆಗ ಸಚಿವ ಸೋಮಣ್ಣ ಆಗಮಿಸಿ ‘‘ಭಾರತೀಯ ಜನತಾ ಪಕ್ಷ ಅನ್ನಪ್ಪಾ’’ ಎಂದರು. ಬಳಿಕ ಭಾರತೀಯ ಜನತಾ ಪಕ್ಷಕ್ಕೆ ಎಂದು ಎಂಟಿಬಿ ನಾಗರಾಜ್ ಭಾಷಣ ಮುಂದುವರೆಸಿದರು.
ಇದನ್ನೂ ಓದಿ:
ಮಧ್ಯ ಪ್ರದೇಶದಲ್ಲಿ ಚುರುಕಾದ ರೈತರ ಪ್ರತಿಭಟನೆ; ಅಕ್ಟೋಬರ್ 28ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ್
ಬಿಎಸ್ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ
Published On - 5:18 pm, Thu, 21 October 21