Arun Kumar Puthila: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಗೆ ಬಿಜೆಪಿ ಗಡುವು: ಇಂದೇ ಅಂತಿಮ ನಿರ್ಧಾರ ಸಾಧ್ಯತೆ

| Updated By: Ganapathi Sharma

Updated on: Feb 05, 2024 | 8:25 AM

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವರ್ಚಸ್ವಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆಗೆ ಪಕ್ಷ ಗಡುವು ವಿಧಿಸಿದೆ ಎನ್ನಲಾಗಿದ್ದು, ಕೆಲವು ಷರತ್ತುಗಳನ್ನೂ ಒಡ್ಡಿದೆ. ಇವುಗಳನ್ನು ಒಪ್ಪಿ ಅರುಣ್ ಅವರು ಬಿಜೆಪಿ ಸೇರುತ್ತಾರಾ? ಅಥವಾ ದಕ್ಷಿಣ ಕನ್ನಡದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಸೆಡ್ಡು ಹೊಡೆಯಲಿದೆಯೇ ಎಂಬುದು ಇಂದು ಬಹಿರಂಗವಾಗುವ ನಿರೀಕ್ಷೆ ಇದೆ.

Arun Kumar Puthila: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಗೆ ಬಿಜೆಪಿ ಗಡುವು: ಇಂದೇ ಅಂತಿಮ ನಿರ್ಧಾರ ಸಾಧ್ಯತೆ
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ & ಬಿಜೆಪಿ ಚಿಹ್ನೆ
Follow us on

ಮಂಗಳೂರು, ಫೆಬ್ರವರಿ 5: ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಅವರ ಸೇರ್ಪಡೆಗೆ ಬಿಜೆಪಿ (BJP) ಗಡುವು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ. ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿರುವುದರ ಜತೆಗೆ ಕೆಲವೊಂದು ಷರತ್ತುಗಳನ್ನೂ ಪುತ್ತಿಲ ಆವರಿಗೆ ಬಿಜೆಪಿ ನಾಯಕರು ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು (ಸೋಮವಾರ) ಅರುಣ್ ಪುತ್ತಿಲ ಸಮಾಲೋಚನಾ ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಅವರು ಹುಟ್ಟುಹಾಕಿರುವ ಪುತ್ತಿಲ ಪರಿವಾರದ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನದ ಬಗ್ಗೆ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಯಲಿದೆ.

ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪುತ್ತಿಲ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದುವರೆಯಲು ಪುತ್ತಿಲ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಮತ್ತು ಆರಸ್​​​ಎಸ್‌ಎಸ್ ಜೊತೆಗಿನ ಹಲವು ಸುತ್ತಿನ ಮಾತುಕತೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ಬಿಜೆಪಿ ವಿಧಿಸಿರುವ ಷರತ್ತೇನು?

ಪುತ್ತಿಲ ಪರಿವಾರವನ್ನು ವಿಸರ್ಜಿಸಿದರೆ ಮಾತ್ರ ಬಿಜೆಪಿಗೆ ಬನ್ನಿ ಎಂದು ಕೆಲವು ಬಿಜೆಪಿ ನಾಯಕರು ಷರತ್ತು ಒಡ್ಡಿದ್ದಾರೆ ಎಂದೂ ಮೂಲಗಳು ಹೇಳಿವೆ. ಆದರೆ, ಪುತ್ತಿಲ ಪರಿವಾರವನ್ನು ಅರುಣ್ ಪುತ್ತಿಲ ವಿಸರ್ಜನೆ ಮಾಡುತ್ತಾರೆಯೇ ಎಂಬುದೇ ಸದ್ಯದ ಕುತೂಹಲವಾಗಿದೆ. ಈ ಮಧ್ಯೆ, ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಅವರ ಅಭಿಮಾನಿಗಳಲ್ಲೇ ಭಿನ್ನಾಭಿಪ್ರಾಯ ಇದೆ. ಪಕ್ಷ ಸೇರ್ಪಡೆ ಬೇಡ, ಲೋಕಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸರ್ಧಿಸಿ ಎಂಬ ಒತ್ತಡ ಹಲವರಿಂದ ವ್ಯಕ್ತವಾಗಿದೆ. ಇನ್ನು ಕೆಲವರು ಬಿಜೆಪಿ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದಾರೆ.

ಪುತ್ತಿಲ ಪರಿವಾರ ವಿಸರ್ಜನೆ ಬಗ್ಗೆಯೂ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಸಡ್ಡು ಹೊಡೆದು ಅರಂಭಗೊಂಡಿದ್ದ ಪುತ್ತಿಲ ಪರಿವಾರ ಮತ್ತು ಅದರ ಮುಖಂಡರಿಂದ ನಿರಂತರವಾಗಿ ಬಿಜೆಪಿ ವಿರುದ್ಧ ಚಟುವಟಿಕೆ ನಡೆಯುತ್ತಿದೆ ಎಂದು ಬಿಜೆಪಿಯ ಹಲವು ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿಗೆ ವಿರುದ್ಧವಾಗಿ ಆರಂಭಿಸಿರುವ ಪುತ್ತಿಲ ಪರಿವಾರ ವಿಸರ್ಜಿಸಿ ಬರುವಂತೆ ಷರತ್ತು ವಿಧಿಸಲಾಗಿದೆ ಎನ್ನಲಾಗಿದೆ.

ಸ್ಥಾನಮಾನಕ್ಕೆ ಪುತ್ತಿಲ ಪಟ್ಟು

ಸೂಕ್ತ ಸ್ಥಾನಮಾನ ದೊರೆತರಷ್ಟೇ ಬಿಜೆಪಿ ಜೊತೆ ಬರುವ ಸೂಚನೆಯನ್ನು ಅರುಣ್ ಪುತ್ತಿಲ ಈಗಾಗಲೇ ನೀಡಿದ್ದಾರೆ. ಇಂದಿನ ಸಭೆಯ ಬಳಿಕ ಪುತ್ತಿಲ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಈ ಹಿಂದೆ ಪುತ್ತಿಲ ಅವರು ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವದಂತಿ ಇತ್ತು. ವಿಧಾನಸಭೆ ಚುನಾವಣೆಯ ನಂತರದ ಬೆಳವಣಿಗೆಗಳಲ್ಲಿ ಪುತ್ತಿಲ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ ಅವರ ಜತೆ ಮಾತುಕತೆ ನಡೆಸಿ ಬಂದಿದ್ದರು. ಆದಾಗ್ಯೂ, ನಂತರ ನಡೆದ ಸ್ಥಳೀಯ ಕೆಲವು ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಂದು ಕಡೆ ಗೆಲುವೂ ಪುತ್ತಿಲ ಪರಿವಾರದ್ದಾಗಿತ್ತು.

ಇದನ್ನೂ ಓದಿ: ಮಂಗಳೂರು ಮಳಲಿ ಮಸೀದಿ ವಿವಾದ: ವಿಎಚ್​ಪಿ ಅರ್ಜಿ ವಿಚಾರಣೆಗೆ ಅಂಗೀಕಾರ, ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ

ಸದ್ಯ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಪುತ್ತಿಲ ಪರಿವಾರದ ನಡೆ ದಕ್ಷಿಣ ಕನ್ನಡ ಜಿಲ್ಲಾ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ