ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಯುವಕರ ಸೆರೆ ಕೇಸ್: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಐವರು ಯುವಕರು ಫೆ.1 ರಂದು 42 ಸಿಮ್ಗಳನ್ನು ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ನೆರಿಯ ಗ್ರಾಮದಲ್ಲಿ ಬಂಧಿಸಿದ್ದರು. ಆರೋಪಿಗಳ ಬಳಿ ಇದ್ದ 42 ಸಿಮ್ಗಳನ್ನು ತಪಾಸಣೆ ನಡೆಸಿದಾಗ ಪೊಲೀಸರಿಗೆ ಹಲವು ಅಂಶಗಳು ತಿಳಿದು ಬಂದಿವೆ.
ಮಂಗಳೂರು, ಫೆಬ್ರವರಿ 02: ನಿಗೂಢ ಕೆಲಸಕ್ಕಾಗಿ 42 ಸಿಮ್ಗಳನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಿಂದ ಬೆಂಗಳೂರಿಗೆ (Bengaluru) ಸಾಗಿಸುತ್ತಿದ್ದ ಯುವಕರ ತಂಡವನ್ನು ಧರ್ಮಸ್ಥಳ ಪೊಲೀಸರು (Dharmasthala Police) ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಹಲವು ಅಂಶ ಬಹಿರಂಗಗೊಂಡಿವೆ. ಆರೋಪಿಗಳು ಆನ್ಲೈನ್ ವಿದೇಶಿ ಕರೆನ್ಸಿ ವ್ಯವಹಾರಕ್ಕೆ (Foreign currency trading) ಸಿಮ್ ಕಾರ್ಡ್ (SIM Card) ಬಳಸುತ್ತಿದ್ದರು ಎಂದು ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22), ಮೊಹಮ್ಮದ್ ಸಾಧಿಕ್ (27), ಮತ್ತೋರ್ವ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು.
ಬೆಂಗಳೂರು ಮೂಲದ ವ್ಯಕ್ತಿಯ ಸೂಚನೆಯಂತೆ ಆರೋಪಿಗಳು ಅನಧಿಕೃತ ಆ್ಯಪ್ಗಳ ಮೂಲಕ ಆನ್ಲೈನ್ನಲ್ಲಿ ವಿದೇಶಿ ಕರೆನ್ಸಿಗಳ ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದರು. ಬೆಳ್ತಂಗಡಿ ಮೂಲದ ಯುವಕರು ತಮ್ಮ ವಿಳಾಸ ನೀಡಿ ಸಿಮ್ ಕಾರ್ಡ್ ಖರೀದಿಸಿ ಆರೋಪಿಗಳಿಗೆ ನೀಡುತ್ತಿದ್ದರು. ಹಲವರು ಕಮಿಷನ್ ಆಸೆಗಾಗಿ ಸಿಮ್ ಕಾರ್ಡ್ ಖರೀದಿಸಿದ್ದು, ಒಂದು ಸಿಮ್ಗೆ 800 ರೂ. ನಂತೆ ಆರೋಪಿಗಳು ಕಮಿಷನ್ ಕೊಡುತ್ತಿದ್ದರು.
ಸಿಮ್ ಕೈ ಸೇರುತ್ತಿದ್ದಂತೆ ಆರೋಪಿಗಳ ಅದನ್ನು ಮತ್ತೊಬ್ಬ ವ್ಯಕ್ತಿಗೆ ನೀಡಿ ಆನ್ ಲೈನ್ ಟ್ರೇಡಿಂಗ್ ವ್ಯವಹಾರ ಮಾಡಿಸುತ್ತಿದ್ದರು. ಒಂದು ಸಿಮ್ ಬಳಸಿ ಆ್ಯಪ್ ಮೂಲಕ 20 ಬಾರಿಯಷ್ಟೆ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಸಾಕಷ್ಟು ಸಿಮ್ ಕಾರ್ಡ್ ಪಡೆದು ವ್ಯವಹಾರ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ. ಕೆಲ ಅನಧಿಕೃತ ಆ್ಯಪ್ಗಳಲ್ಲಿ ವಿದೇಶಿ ಕರೆನ್ಸಿ ಟ್ರೇಡಿಂಗ್ಗೆ ಭಾರತದಲ್ಲಿ ನಿರ್ಬಂಧವಿದೆ.
ಇದನ್ನೂ ಓದಿ: ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಇಂಜಿನಿಯರ್ ಮೇಲೆ ಭಟ್ಕಳ್ ಮಹಿಳೆಯ ಲವ್: ಮನೆ ಹೊಕ್ಕು ವಿಚಾರಣೆ ನಡೆಸಿದ ಎಟಿಎಸ್
ಆರೋಪಿ ಅಕ್ಬರ್ ಅಲಿ ದುಬೈನಲ್ಲಿ ಇದ್ದುಕೊಂಡು ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದನು. ಈ ಸಿಮ್ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸ್ನೇಹಿತ ಮೊಹಮ್ಮದ್ ಮುಸ್ತಫಾನಿಗೆ ಸೂಚನೆ ನೀಡುತ್ತಿದ್ದನು. ಅದರಂತೆ ಮೊಹಮ್ಮದ್ ಮುಸ್ತಫಾ ತನ್ನ ಸ್ನೇಹಿತರಾದ ರಮೀಝ್ ಮತ್ತು ಮಹಮ್ಮದ್ ಸಾಧಿಕ್ಗೆ ಅಸೈನ್ಮೆಂಟ್ ನೀಡುತ್ತಿದ್ದನು. ಬಳಿಕ ರಮೀಝ್ ಮತ್ತು ಮಹಮ್ಮದ್ ಸಾಧಿಕ್ ತಮ್ಮ ಅತ್ಮಿಯರಿಗೆ ಕಮಿಷನ್ ಕೊಡಿಸಿ ಅವರಿಂದ ತಮಗೆ ಎಷ್ಟು ಬೇಕು ಅಷ್ಟು ಸಿಮ್ ಕಾರ್ಡ್ಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ ಮೊಹಮ್ಮದ್ ಮುಸ್ತಫಾನಿಗೆ ಕೊಡುತ್ತಿದ್ದರು. ನಂತರ ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್ಗಳನ್ನು ಮಹಮ್ಮದ್ ಮುಸ್ತಫಾ ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುತ್ತಿದ್ದನು.
ಇನ್ನು ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಕೇಂದ್ರ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ಇಲಾಖೆ ಕೂಡ ಮಾಹಿತಿ ಸಂಗ್ರಹಿಸುತ್ತಿದೆ. ಹಾಗೆ ರಾಜ್ಯ ಸರ್ಕಾರ ಕೂಡ ಪೊಲೀಸ್ ಇಲಾಖೆಯಿಂದ ಇಂಚಿಂಚು ಮಾಹಿತಿ ಪಡೆದುಕೊಳ್ಳುತ್ತಿದೆ.
ಐವರು ಯುವಕರು ಫೆ.1 ರಂದು 42 ಸಿಮ್ಗಳನ್ನು ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ನೆರಿಯ ಗ್ರಾಮದಲ್ಲಿ ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Sun, 4 February 24