ಮಂಗಳೂರು: ಕಳೆದ ಎರಡು ವರ್ಷಗಳಿಂದ ತಾನು ಮದುವೆಯಾದ ಗಂಡನಿಗಾಗಿ ಹೋರಾಡುತ್ತಿದ್ದ ಆಸಿಯಾ ತನ್ನ ಹೋರಾಟವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಮೂಲತಃ ಶಾಂತಿ ಜೂಬಿ ಅಲಿಯಾಸ್ ಆಸಿಯಾ, ಕೇರಳದ ಪ್ರಸಿದ್ಧ ತೀಯ ಎಂಬ ಕುಟುಂಬದ ಹೆಣ್ಣುಮಗಳು. ಕಳೆದ ಎರಡು ವರ್ಷಗಳ ಹಿಂದೆ ಸುಳ್ಯಕ್ಕೆ ಬಂದ ಆಸಿಯಾ ಲಾಕ್ ಡೌನ್ ವೇಳೆ ಸುಳ್ಯ ಪೊಲೀಸರ ಸಹಾಯ ಪಡೆದು ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದಳು. ಇರಲು ಸೂರಿಲ್ಲದೇ ಇನ್ನು ಕೂಡ ಅದೇ ಲಾಡ್ಜ್ನಲ್ಲಿ ಉಳಿದುಕೊಂಡಿದ್ದು ಹಿಂದು ಹಾಗೂ ಮುಸ್ಲಿಂ ಸಂಘಟನೆಯ ಮೊರೆ ಹೋಗಿ ತನ್ನ ಪತಿಯನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಳು. ಪ್ರತಿಭಟನೆಗಳನ್ನು ಮಾಡಿದ್ದಳು. ಆದ್ರೆ ಕಳೆದ ವಾರ ಇಬ್ರಾಹಿಂ ಕಟ್ಟೆಕಾರು ಈಕೆಯ ಎದರು ಬಂದು ನೀನು ನನಗೆ ಬೇಡ ಅಂತಾ ಹೇಳಿದ್ದಕ್ಕೆ ತನ್ನ ಹೋರಾಟದಿಂದ ಆಸಿಯಾ ಹಿಂದೆ ಸರಿದಿದ್ದಾಳೆ. ತನ್ನ ತವರು ಮನೆಯವರ ಅಪೇಕ್ಷೆಯಂತೆ ಘರ್ ವಾಪಸಿ ಕೂಡ ಆಗದೇ ತಾನು ಮುಸ್ಲಿಂ ಧರ್ಮದಲ್ಲಿಯೇ ಇದ್ದು ತನ್ನ ಜೀವನ ಸಾಗಿಸುತ್ತೇನೆ ಅಂತಾ ಹೇಳಿದ್ದಾರೆ.
ಆಕೆ ಸಾವಿರಾರು ಕೋಟಿ ಆಸ್ತಿಯ ಒಡತಿ. ಆಕೆಯ ಕುಟುಂಬ ಕಣ್ಣೂರಿನ ಪ್ರಸಿದ್ಧ ದೇವಸ್ಥಾನದ ಟ್ರಸ್ಟ್ ಒಂದನ್ನು ನಡೆಸುತ್ತಿದ್ದರು. ಆಕೆಯನ್ನು ಇವರ ಅಂತಸ್ತಿಗೆ ತಕ್ಕಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಉದ್ಯಮಿಯೊಬ್ಬರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆಕೆಯ ಹೆಸರು ಶಾಂತಿ ಜೂಬಿ. ಶಾಂತಿ ಜೂಬಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದವನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಅಬ್ದುಲ್ ಹಾಜಿ ಕಟ್ಟೆಕಾರ್ ಮಗ ಇಬ್ರಾಹಿಂ ಖಲೀಲ್. ಈತನ ಜೊತೆ ಫೋನ್ ಸಂಪರ್ಕದಲ್ಲಿದ್ದ ಕಾರಣ ಶಾಂತಿಯ ಪತಿ ಮೊದಲು ಈಕೆಯನ್ನು ಬಿಟ್ಟಿದ್ದ. ಈಕೆಯನ್ನು ಪ್ರೀತಿಸಿದ ಖಲೀಲ್ ನನ್ನು ಶಾಂತಿ ಕೂಡ ಪ್ರೀತಿಸಲು ಆರಂಭಿಸಿದ್ದಳು. ನಿನ್ನನ್ನು ಮದುವೆಯಾಗುತ್ತೇನೆ. ಆದ್ರೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರಗೊಳ್ಳಬೇಕು ಅಂತಾ ಹೇಳಿದ್ದ. ಅದರಂತೆ ಆಕೆಗೆ ಬೆಂಗಳೂರಿನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಬೋಧನೆ ಕೊಟ್ಟು ಬಳಿಕ ಇಸ್ಲಾಂಗೆ ಮತಾಂತರ ಮಾಡಿಸಿ ಆಕೆಗೆ ಆಸಿಯಾ ಅಂತಾ ಹೆಸರಿಡಲಾಗಿತ್ತು. ಬಳಿಕ ಅವಳನ್ನು ಖಲೀಲ್ ನಿಖಾ ಮಾಡಿಕೊಂಡಿದ್ದ.
ಘಟನೆ ಏನೇನಾಗಿತ್ತು?
ಆಕೆಯ ಬಳಿಯಿದ್ದ ವಿಜಯನಗರದ ಐಷರಾಮಿ ಬಂಗಲೆಯಲ್ಲೇ ಅವರು ವಾಸವಾಗಿದ್ರು. ಈ ವಿಚಾರ ಶಾಂತಿ ಜೂಬಿಯ ಮನೆಯವರಿಗೆ ಗೊತ್ತಾಗಿತ್ತು. ಮನೆಯವರು ಈಕೆಯನ್ನು ದೂರ ಮಾಡಿದ್ರು. ತವರಿನಿಂದ ಕೊಟ್ಟಿದ್ದ ಎಲ್ಲಾ ಆಸ್ತಿ ಪಾಸ್ತಿಯನ್ನು ಅವರಿಗೆ ವಾಪಾಸ್ ಮಾಡಿದ್ದಳು. ಹೀಗೆ ಆಸ್ತಿ ಕಳೆದುಕೊಂಡ ಬಳಿಕ ಖಲೀಲ್ ದೂರವಾಗಿದ್ದ. ಇನ್ನು ಖಲೀಲ್ ನನ್ನು ಹುಡುಕಿಕೊಂಡು ಕಳೆದ ಎರಡು ವರ್ಷಗಳ ಹಿಂದೆ ಸುಳ್ಯಕ್ಕೆ ಬಂದ ಆಸಿಯಾ ಲಾಕ್ ಡೌನ್ ವೇಳೆ ಸುಳ್ಯ ಪೊಲೀಸರ ಸಹಾಯ ಪಡೆದು ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದಳು.
ಇನ್ನು ಖಲೀಲ್ನ ಅಣ್ಣ ಶಿಹಾಬ್, ಆಸಿಯಾಳಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದ. ಅದಕ್ಕೆ ನಾನು ಒಪ್ಪದಿದ್ದಾಗ ಖಲೀಲ್ನನ್ನು ಗೌಪ್ಯವಾಗ ಜಾಗದಲ್ಲಿಟ್ಟಿದ್ದಾರೆ ಅಂತಾ ಆಸಿಯಾ ಆರೋಪಿಸಿದ್ದಾಳೆ. ಈ ಬಗ್ಗೆ ನ್ಯಾಯ ಕೊಡಿಸುವಂತೆ ಮುಸ್ಲಿಂ ಧರ್ಮಗರುಗಳು, ಮುಸ್ಲಿಂ ಸಂಘಟನೆಗಳು, ಎಸ್.ಡಿ.ಪಿ.ಐ ಪಕ್ಷದ ಮುಖಂಡರು ಹೀಗೆ ಸಾಕಷ್ಟು ಜನರನ್ನು ಆಸಿಯಾ ಭೇಟಿಯಾಗಿದ್ದಾಳೆ. ಆದ್ರೆ ಯಾರು ಕೂಡ ನ್ಯಾಯ ಕೊಡಿಸಲು ಮುಂದಾಗಿಲ್ಲ. ಇದ್ರಿಂದ ಮನನೊಂದು ಈ ಶುಕ್ರವಾರದ ವರೆಗೂ ನೋಡಿ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಆಸಿಯಾ ಹೇಳಿದ್ದಳು.
ಈಕೆ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ನಂಬಿದ್ದು ಈಗಲೂ ಕೂಡ ಇಸ್ಲಾಂ ತ್ಯಜಿಸಿಲ್ಲ. ನಾನು ಘರ್ ವಾಪಾಸಿಯಾಗಲ್ಲ. ನನ್ನಂತೆ ಮುಸ್ಲಿಂ ಧರ್ಮಕ್ಕೆ ಬಂದ ಹೆಣ್ಣು ಮಕ್ಕಳು ಅಮಯಾಕರಂತೆ ಇರಲ್ಲ ಅಂತಾ ಮುಸ್ಲಿಮರಿಗೆ ತೋರಿಸುತ್ತೇನೆ ಅಂತಾ ಆಸಿಯಾ ಪಟ್ಟು ಹಿಡಿದಿದ್ದಳು. ನನಗೆ ನ್ಯಾಯ ಕೊಡಿಸಿ ಅಂತಾ ಸಿಕ್ಕ ಸಿಕ್ಕವರಲ್ಲಿ ಕೇಳುತ್ತಿದ್ದಳು. ತನ್ನ ಗಂಡನ ಅಂಗಡಿ, ಮನೆ ಹೀಗೆ ವಿವಿಧ ಕಡೆ ಪ್ರತಿಭಟನೆ ಮಾಡಿದ್ದಳು. ಧಾರ್ಮಿಕ ಗುರುಗಳನ್ನು ಸಂಪರ್ಕಿಸಿ ಅವರಿಂದ ರಾಜಿ ಮಾಡಿಸಲು ಯತ್ನಿಸಿದ್ದಳು. ಆದ್ರೆ ಅದ್ಯಾವುದು ಸಫಲವಾಗಲಿಲ್ಲ.
ಈಗ ತನ್ನ ನಿರ್ಧಾರನ್ನು ಆಸಿಯಾ ಹಿಂದೆ ಪಡೆದಿದ್ದಾಳೆ. ಅವರಿಗೆ ನಾನು ಬೇಡವಾದ ಮೇಲೆ ನನಗೂ ಅವರು ಬೇಡೆ. ಕಾನೂನಾತ್ಮಕವಾಗಿ ಮದುವೆಯಾಗದ ಕಾರಣ, ಕಾನೂನು ಹೋರಾಟ ಮಾಡಲು ಸಾದ್ಯವಾಗಲಿಲ್ಲ. ಇನ್ನು ಕಾನೂನಾತ್ಮಕವಾಗಿ ಮದುವೆಯಾಗದ ಕಾರಣ ಕೋರ್ಟ್ ನಿಂದ ವಿಚ್ಛೇದನ ಕೂಡ ಪಡೆಯುವ ಅವಶ್ಯಕತೆ ಇಲ್ಲ ಅಂತಾ ಆಸಿಯಾ ಹೇಳಿದ್ದಾರೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಗಂಡ ನಾಪತ್ತೆ: ಅನಾಥ ಪ್ರಜ್ಞೆ ಅನುಭವಿಸುತ್ತಿರುವ ಪತ್ನಿ
ಇದನ್ನೂ ಓದಿ: ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು
Published On - 5:12 pm, Sat, 23 October 21