Mangalore News; ತುಳು ಭಾಷೆಯ ಕವನ ಸಂಕಲನಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಮೆಚ್ಚುಗೆ
Assam CM reaction to Tulu poem book; ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕವನ ಸಂಕಲನದ ಪ್ರತಿಗಳನ್ನು ಕಳುಹಿಸಲಾಗಿತ್ತು. ಇಲ್ಲಿಯವರೆಗೆ ಆ ಕವನ ಸಂಕಲನ ಮತ್ತು ಪತ್ರಕ್ಕೆ ಅಸ್ಸಾಂ ಮುಖ್ಯಮಂತ್ರಿಗಳೊಬ್ಬರಿಂದಲೇ ಪ್ರತಿಕ್ರಿಯೆ ಬಂದಿದೆ ಎಂದು ಜೈ ತುಳುನಾಡು ಸಂಘಟನೆ ತಿಳಿಸಿದೆ.
ಮಂಗಳೂರು, ಆಗಸ್ಟ್ 11: ತುಳು ಭಾಷೆಯ ಕವನ ಸಂಕಲನವೊಂದಕ್ಕೆ (Tulu Poem) ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಮೆಚ್ಚುಗೆ ಸೂಚಿಸಿ ಪತ್ರ ಬರೆದಿದ್ದಾರೆ. ಕವನ ಸಂಕಲನ ಕಳುಹಿಸಿ ಸುಮಾರು ಒಂದು ವರ್ಷದ ನಂತರ ಅವರು ಪ್ರತಿಕ್ರಿಯಿಸಿ ಪತ್ರ ಬರೆದಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ‘ಜೈ ತುಳುನಾಡು’ ಸಂಘಟನೆಯ ಅಂದಿನ ಅಧ್ಯಕ್ಷ ಅಶ್ವಥ್ ತುಳುವೆ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಜತೆಗೆ, ‘ತುಳು ಪುರ್ಪ’ ಕವನ ಸಂಕಲನದ ಪ್ರತಿಯನ್ನು ಕಳುಹಿಸಿಕೊಟ್ಟಿದ್ದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ 111 ಲೇಖಕರು ಬರೆದ 111 ತುಳು ಕವಿತೆಗಳ ‘ತುಳು ಪುರ್ಪ’ ಕವನ ಸಂಕಲನವನ್ನು ‘ಜೈ ತುಳುನಾಡು’ ಸಂಘಟನೆ ಪ್ರಕಟಿಸಿತ್ತು. ಉದಯೋನ್ಮುಖ ತುಳು ಕವಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಕಳೆದ ವರ್ಷ ಆಗಸ್ಟ್ 15 ರಂದು ಕವನ ಸಂಕಲನ ಬಿಡುಗಡೆ ಮಾಡಿದ ನಂತರ ಮತ್ತು ನಾವು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕವನ ಸಂಕಲನದ ಪ್ರತಿಗಳನ್ನು ಕಳುಹಿಸಿದ್ದೆವು. ರಾಜ್ಯದಲ್ಲಿ ಗೃಹ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪುಸ್ತಕದ ಪ್ರತಿ ಕಳುಹಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಆ ಕವನ ಸಂಕಲನ ಮತ್ತು ಪತ್ರಕ್ಕೆ ಅಸ್ಸಾಂ ಮುಖ್ಯಮಂತ್ರಿಗಳೊಬ್ಬರಿಂದಲೇ ಪ್ರತಿಕ್ರಿಯೆ ಬಂದಿದೆ ಎಂದು ಅಶ್ವಥ್ ತುಳುವೆ ಪ್ರತಿಕ್ರಿಯಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ರದಲ್ಲೇನಿದೆ?
‘ತುಳು ಪುರ್ಪ’ ಕವನ ಸಂಕಲನಕ್ಕೆ ಪ್ರತಿಕ್ರಿಯಿಸಿ ಜುಲೈ 20ರಂದು ಪತ್ರ ಬರೆದಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ತುಳು ಭಾಷೆಯನ್ನು ಮಾತನಾಡುವವರಿಗೆ, ಅವರ ಭಾಷೆಯನ್ನು ಪಂಚಮಹಾ ದ್ರಾವಿಡ ಭಾಷಗಳಲ್ಲಿ ಒಂದು ಎಂದು ಪರಿಗಣಿಸುವುದು ನಿಜಕ್ಕೂ ಹೆಮ್ಮೆಯ ವಿಷಯ. ಭಾರತವು ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಾಡು. ಭಾಷೆಗಳ ವೈವಿಧ್ಯತೆಯು ಭಾರತದ ಶಕ್ತಿಯ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಆತನ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಪ್ರತಿಯೊಂದು ಭಾಷೆಯೂ ಬುದ್ಧಿವಂತಿಕೆಯ ಭಂಡಾರ ಮತ್ತು ಜ್ಞಾನದ ಅನ್ವೇಷಣೆಯ ಮಾಧ್ಯಮವಾಗಿದೆ. ತುಳು ಭಾಷೆಯನ್ನು ದಕ್ಷಿಣದ ಐದು ಪ್ರಮುಖ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಲಪಾಡಿ ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಂದ ಎಸ್ಡಿಪಿಐಗೆ ದಕ್ಕಿದ ಅಧ್ಯಕ್ಷ ಸ್ಥಾನ
ಶ್ರೀಮಂತ ಭಾಷೆಗೆ ಅರ್ಹ ಸ್ಥಾನ ನೀಡಬೇಕು; ಅಸ್ಸಾಂ ಸಿಎಂ
ತುಳುವಿನಷ್ಟು ಶ್ರೀಮಂತ ಭಾಷೆಗೆ ಅರ್ಹವಾದ ಸ್ಥಾನವನ್ನು ನೀಡಬೇಕು ಎಂಬುದು ನನ್ನ ದೃಢ ನಿಲುವು. ಮುಂದಿನ ದಿನಗಳಲ್ಲಿ ತುಳು ಭಾಷಿಕರ ಆಶಯ ಮತ್ತು ಆಕಾಂಕ್ಷೆಗಳಿಗೆ ಮನ್ನಣೆ ನೀಡಲಾಗುವುದು ಮತ್ತು ಇದಕ್ಕೆ ಸಂಬಂಧಿಸಿ ಎಲ್ಲಾ ವಿಭಾಗಗಳಿಂದ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಶರ್ಮಾ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ