Champa Shashti: ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಉತ್ಸವದಲ್ಲಿ ಅಂಗಡಿ ಹಾಕಲು ಹಿಂದೂಗಳಿಗೆ ಮಾತ್ರ ಅವಕಾಶ; ಕಾಣಿಸಿಕೊಂಡಿದೆ ಬ್ಯಾನರ್
‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ.
ಮಂಗಳೂರು: ಪ್ರಸಿದ್ಧ ಯಾತ್ರಾಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಸಂಭ್ರಮ ಮೈದುಂಬುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದಾಗಿ ಚಂಪಾಷಷ್ಠಿ ಉತ್ಸವ ಕಳೆಗಟ್ಟಿರಲಿಲ್ಲ. ಆದರೆ ಈ ಬಾರಿ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆಯಿದ್ದು, ದೇಗುಲ ಸಮಿತಿ ಮತ್ತು ಸ್ಥಳೀಯ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬ್ಯಾನರ್ ಸುದ್ದಿಯಾಗಿದೆ. ‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ.
ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ. ದೇವಸ್ಥಾನದ ಜಾತ್ರೆಗಳಲ್ಲಿ ಮೊದಲಿನಿಂದಲೂ ಜಾತಿ ಮತ್ತು ಧರ್ಮ ಭೇದವಿಲ್ಲದೆ ವರ್ತಕರು ಅಂಗಡಿಗಳನ್ನು ಹಾಕಿ, ವ್ಯಾಪಾರ ಮಾಡುತ್ತಿದ್ದರು. ಆದರೆ, ಇದೀಗ ಕಾಣಿಸಿಕೊಂಡಿರುವ ಬ್ಯಾನರ್ನಲ್ಲಿ ‘ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂದು ಬ್ಯಾನರ್ನಲ್ಲಿ ಹೇಳಲಾಗಿದೆ. ‘ಕುಕ್ಕೆ ಸುಬ್ರಹ್ಮಣ್ಯ ಜಾತ್ರಾ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಪೊಲೀಸ್ ಠಾಣೆಗೂ ಹಿಂದೂ ಜಾಗರಣ ವೇದಿಕೆಯ ಸುಬ್ರಹ್ಮಣ್ಯ ಘಟಕದ ವತಿಯಿಂದ ದೂರು ನೀಡಲಾಗಿದೆ.
Karnataka | Hindu Jagaran Vedike put up a poster announcing the banning of other communities’ shops and stalls during the ‘Champa Shashti’ of the Kukke Subrahmanya Temple in Subramanya of Dakshina Kannada district. pic.twitter.com/HGswvSk0i9
— ANI (@ANI) November 24, 2022
ರಂಗಪೂಜೆ, ಅಂಕುರಾರ್ಪಣೆ
ಚಂಪಾಷಷ್ಠಿ ರಥೋತ್ಸವದ ಹಿನ್ನೆಲೆಯಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ, ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ವಿಧಿಗಳು ಬುಧವಾರ (ನ23) ನೆರವೇರಿದವು. ಹೊರಾಂಗಣ ಉತ್ಸವದಲ್ಲಿ ಕಾಚುಕುಜುಂಬ ದೈವವು ಶ್ರೀದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಬಳಿಕ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಲ್ಲಕ್ಕಿ ಉತ್ಸವ ನೆರವೇರಿತು. ರಥಬೀದಿಯಲ್ಲಿ ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾದ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀದೇವರು ಚಂದ್ರಮಂಡಲ ರಥದಲ್ಲಿ ಆಗಮಿಸುವುದು ಲಕ್ಷ ದೀಪೋತ್ಸವದ ದಿನ ಮಾತ್ರ.
ಲಕ್ಷದೀಪೋತ್ಸವ
ಕಾರ್ತಿಕ ಮಾಸದ ಅಮಾವಾಸ್ಯೆ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಬುಧವಾರ ಸಡಗರ ಸಂಭ್ರಮದಿಂದ ನೆರವೇರಿತು. ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷ ಹಣತೆಗಳು ಬೆಳಗಿದವು. ದೇವಸ್ಥಾನದ ಗೋಪುರದಿಂದ ಕಾಶಿಕಟ್ಟೆಯವರೆಗೆ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರದ ವಿವಿಧೆಡೆ ಹಣತೆಗಳು ಬೆಳಗಿದವು.
Published On - 11:39 am, Thu, 24 November 22