Breaking News: ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ

‘ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಮಾಧ್ಯಮ ಹೇಳಿಕೆಯಲ್ಲಿ ಬೆದರಿಕೆ ಹಾಕಲಾಗಿದೆ.

Breaking News: ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ
ಡಾರ್ಕ್​ವೆಬ್ ಮೂಲಕ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 24, 2022 | 1:00 PM

ಬೆಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ‘ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.

‘ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ. ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಬಂಧಿಸಲು ಯತ್ನಿಸುತ್ತಿವೆ, ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಬೆದರಿಕೆ ಹಾಕಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ಏನಿದೆ?

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನ ಒಂದು ಹಾಳೆಯ ಮಾಧ್ಯಮ ಹೇಳಿಕೆಯು ಇಂಗ್ಲಿಷ್​ನಲ್ಲಿದ್ದು, ಕರಪತ್ರದ ವಿನ್ಯಾಸವನ್ನು ಹೋಲುತ್ತದೆ. ಅದರ ಮೇಲೆ 23 ನವೆಂಬರ್, 2022 ಎಂಬ ದಿನಾಂಕದ ಉಲ್ಲೇಖವಿದೆ.

‘ಅಲ್ಲಾಹನು ಹೇಳುತ್ತಾನೆ: ಯಾರ ವಿರುದ್ಧ ಅಕ್ರಮವಾಗಿ ಯುದ್ಧ ಮಾಡಲಾಗುತ್ತಿದೆಯೋ ಅವರಿಗೆ ಹೋರಾಡಲು ಅನುಮತಿ ನೀಡಲಾಗಿದೆ, ಏಕೆಂದರೆ ಅವರು ಅನ್ಯಾಯಕ್ಕೊಳಗಾದವರು (ಅಲ್-ಕುರಾನ್)’ ಎಂಬ ಸಾಲುಗಳು ಮೊದಲ ಪ್ಯಾರಾದಲ್ಲಿದ್ದು, ಅದನ್ನು ಬೋಲ್ಡ್ ಮಾಡಲಾಗಿದೆ. ನಂತರದ ಸಾಲುಗಳು ಹೀಗಿವೆ…

‘ನಾವು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಸಂದೇಶವನ್ನು ರವಾನಿಸಲು ಬಯಸುತ್ತೇವೆ: ನಮ್ಮ ಮುಜಾಹಿದ್ ಸಹೋದರ ಮೊಹಮ್ಮದ್ ಶಾರಿಕ್ ಕೇಸರಿ ಭಯೋತ್ಪಾದಕರ ಭದ್ರಕೋಟೆಯಾದ ಮಂಗಳೂರಿನ ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದನು. ಈ ಕಾರ್ಯಾಚರಣೆಯು ಅದರ ಉದ್ದೇಶಗಳನ್ನು ಪೂರೈಸದಿದ್ದರೂ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಗಳು ಅನುಸರಿಸುತ್ತಿದ್ದರೂ, ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ, ನಾವು ಅದನ್ನು ತಾಂತ್ರಿಕ ದೃಷ್ಟಿಕೋನದಿಂದ ಯಶಸ್ವಿ ಎಂದು ಪರಿಗಣಿಸುತ್ತೇವೆ. ಅವರು ದಾಳಿಯನ್ನು ಸಿದ್ಧಪಡಿಸಿದರು ಮತ್ತು ಅನುಷ್ಠಾನಕ್ಕೆ ತಂದರು.

’ಸಹೋದರನ ಬಂಧನಕ್ಕೆ ಕಾರಣವಾದ ಅಕಾಲಿಕ ಸ್ಫೋಟಕ್ಕೆ ಸಂಬಂಧಿಸಿದಂತೆ, ಇದು ಎಲ್ಲಾ ಮಿಲಿಟರಿ ಮತ್ತು ವಿಧ್ವಂಸಕ ಕಾರ್ಯಾಚರಣೆಗಳೊಂದಿಗೆ ಯಾವಾಗಲೂ ಇರುವ ಸಾಧ್ಯತೆಯಾಗಿದೆ. ಸಹೋದರನ ಬಂಧನದಿಂದ ಸಂತೋಷಪಡುತ್ತಿರುವವರಿಗೆ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರಂತಹವರು ಗಮನಿಸಬೇಕು, ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ. ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ.

‘ನೀವು ಯಾಕೆ ದಾಳಿ ಮಾಡಿದ್ದೀರಿ?” ಎಂದು ಕೇಳುವವರಿಗೆ ನಾವು ಉತ್ತರಿಸಲು ಬಯಸುತ್ತೇವೆ. ಏಕೆಂದರೆ ನಾವು ಈ ಯುದ್ಧಕ್ಕೆ ಮತ್ತು ಫ್ಯಾಸಿಸ್ಟ್‌ಗಳ ಪ್ರತಿರೋಧದ ಹಾದಿಗೆ ಬಲವಂತದಿಂದ ಬಂದಿದ್ದೇವೆ. ರಾಜ್ಯದಲ್ಲಿರುವ ಭಯೋತ್ಪಾದನೆಯ ಕೆಟ್ಟ ರೂಪಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ನಮ್ಮ ಮೇಲೆ ಮುಕ್ತ ಸಮರ ಘೋಷಿಸಿರುವುದರಿಂದ, ಗುಂಪು ಹಲ್ಲೆಯು ಚಾಲ್ತಿಯಲ್ಲಿದೆ. ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ದಬ್ಬಾಳಿಕೆಯ ಕಾನೂನುಗಳು ಮತ್ತು ಅಂಥ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದ, ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ. ಏಕೆಂದರೆ ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗಳೊಂದಿಗೆ ಪ್ರತಿಧ್ವನಿಸುತ್ತವೆ. ಮುಸ್ಲಿಮರಾಗಿ ನಾವು ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಎದುರಿಸಿದಾಗ ಜಿಹಾದ್ ನಡೆಸಲು ಆದೇಶಿಸಲಾಗಿದೆ’ ಎಂದು ಹೇಳಿಕೆಯು ಮುಕ್ತಾಯಗೊಂಡಿದೆ.

ಹೇಳಿಕೆಯ ಕೊನೆಯಲ್ಲಿ ಮತ್ತೊಂದು ವಿಚಾರವನ್ನು ಉಗ್ರರು ಸ್ಪಷ್ಟಪಡಿಸಿದ್ದಾರೆ. ‘ಮುಂದೆ ಯಾವುದಾದರೂ ಕೃತ್ಯ ನಡೆದ ನಂತರವೇ ನಾವು ಹೇಳಿಕೆ ನೀಡುತ್ತೇವೆ. ನಮ್ಮ ಹೆಸರಿನಲ್ಲಿ ಬಿಡುಗಡೆಯಾಗುವ ಯಾವುದೇ ಹೇಳಿಕೆಯ ಹೊಣೆಯನ್ನು ನಾವು ಹೊರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Published On - 12:20 pm, Thu, 24 November 22