ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲಗೆ ಜಾಮೀನು

| Updated By: Ganapathi Sharma

Updated on: Sep 02, 2024 | 2:51 PM

ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದು, ಇದು ತಮ್ಮ ವಿರುದ್ಧ ರಾಜಕೀಯವಾಗಿ ಮಾಡಿರುವ ಷಡ್ಯಂತ್ರದ ಭಾಗ ಎಂದಿದ್ದಾರೆ. ಇನ್ನು ಪ್ರಕರಣದ ಸಂಬಂಧ ಪುತ್ತೂರಿನ ಜೆಎಂಎಫ್​ಸಿ ಕೋರ್ಟ್​ ಅವರಿಗೆ ಜಾಮೀನು ನೀಡಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲಗೆ ಜಾಮೀನು
ಅರುಣ್ ಕುಮಾರ್ ಪುತ್ತಿಲ
Image Credit source: Facebook
Follow us on

ಪುತ್ತೂರು, ಸೆಪ್ಟೆಂಬರ್ 2: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜೆಎಂಎಫ್​ಸಿ ಕೋರ್ಟ್​ನಿಂದ ಜಾಮೀನು ಮಂಜೂರಾಗಿದೆ. ಪ್ರಕರಣ ಸಂಬಂಧ ಅರುಣ್ ಕುಮಾರ್ ಪುತ್ತಿಲ ಸೋಮವಾರ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪುತ್ತಿಲ ಪರ ವಕೀಲರ ವಾದ ಪುರಸ್ಕರಿಸಿ ಜಾಮೀನು ನೀಡಿದೆ.

ಬೆಂಗಳೂರಿನ ಪೈ ವಿಸ್ತಾ ಹೋಟೆಲ್​​ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಅರುಣ್​ ಪುತ್ತಿಲ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ 47 ವರ್ಷದ ಮಹಿಳೆ ದೂರು ನೀಡಿದ್ದರು. ಫೋಟೋ, ಸೆಲ್ಫಿ ವಿಡಿಯೋ ತೋರಿಸಿ ಬ್ಲ್ಯಾಕ್​​​ಮೇಲ್​​​ ಮಾಡಿದ್ದಾಗಿ ಆರೋಪ ಮಾಡಿದ್ದರು. ಇದರ ಅನ್ವಯ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 417, 354A, 506 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

2023 ಜೂನ್​ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್​ನಲ್ಲಿ ದೌರ್ಜನ್ಯ ನಡೆಸಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದರು.

ಮಹಿಳೆಯ ಆರೋಪಗಳೇನು?

‘‘ನಾನು ಅರುಣ್ ಕುಮಾರ್ ಪುತ್ತಿಲ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರಭಾವಿತನಾಗಿದ್ದೆ ಮತ್ತು ಅವರ ಅಭಿಮಾನಿಯಾಗಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಬೆಂಬಲ ನೀಡುತ್ತಿದ್ದೆ. 2023ರ ಜೂನ್ ಮೊದಲ ವಾರದಲ್ಲಿ ಬೆಂಗಳೂರಿನ ಹೋಟೆಲ್‌ಗೆ ಬರುವಂತೆ ಹೇಳಿ ಲೈಂಗಿಕ ಕಿರುಕುಳ ನೀಡಿದ್ದರು. ಬಳಿಕ ಬ್ಲಾಕ್​ಮೇಲ್ ಮಾಡಿ ಎಲ್ಲಿಗೆ ಹೋದರೂ ಕರೆ ಮಾಡುತ್ತಿದ್ದರು. ನನ್ನ ಮಗಳಿಗೆ ಜೀವನದುದ್ದಕ್ಕೂ ಎಲ್ಲವನ್ನೂ ಒದಗಿಸುತ್ತೇನೆ ಎಂದು ಭರವಸೆ ನೀಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನನ್ನನ್ನು ಶೋಷಿಸಿದರು. ಅರುಣ್ ಜೊತೆಯಲ್ಲಿದ್ದಾಗ ಫೋಟೋ, ಸೆಲ್ಫಿ, ಆಡಿಯೋ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಸಿ ತನ್ನ ಕೆಲಸ ಮಾಡಿಕೊಳ್ಳುತ್ತಿದ್ದರು. 2024ರ ಲೋಕಸಭಾ ಚುನಾವಣೆಯ ನಂತರ ಅವರು ನನ್ನ ಸಂಪರ್ಕವನ್ನು ಕಡಿಮೆ ಮಾಡಿದರು. ಈಗ ನನ್ನ ಬಳಿ ಬಾಡಿಗೆ ಕಟ್ಟಲು ಹಣವಿಲ್ಲ ಮತ್ತು ಕೆಲಸವೂ ಇಲ್ಲ’’ ಎಂದು ಮಹಿಳೆ ದೂರಿದ್ದರು.

ರಾಜಕೀಯ ಷಡ್ಯಂಡ್ರ: ಪುತ್ತಿಲ

ಲೈಂಗಿಕ ದೌರ್ಜನ್ಯ ವಿಚಾರವಾಗಿ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಕುಮಾರ್ ಪುತ್ತಿಲ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನನಗೆ ಆ ಮಹಿಳೆ ಪರಿಚಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR ದಾಖಲು

ಇವು ನನ್ನ ವಿರುದ್ಧ ಮಹಿಳೆ ಮಾಡಿರುವ ಸುಳ್ಳು ಆರೋಪಗಳು. ಇದೊಂದು ಪೂರ್ವ ಯೋಜಿತ ಕೃತ್ಯದಂತೆ ತೋರುತ್ತಿದೆ. ಈ ಸಂಚಿನಲ್ಲಿ ರಾಜಕೀಯ ಸೇಡಿನ ಹುನ್ನಾರವೂ ಸೇರಿಕೊಂಡಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ