ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷೆಯನ್ನು ಅಧಿಕೃತ ಮಾಡಲು ಗಂಭೀರ ಪರಿಶೀಲನೆ ಮಾಡಲಾಗುವುದು. ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎಂಬ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಕಂಬಳ ಬಹಳ ಪುರಾತನವಾದ ಗ್ರಾಮೀಣ ಕ್ರೀಡೆಯಾಗಿದೆ. ಇದು ಬಹಳ ಜನಪ್ರಿಯವಾಗಿದೆ ಎಂಬುದು ಇಲ್ಲಿ ಸೇರಿದ ಜನರನ್ನು ನೋಡಿದಾಗಲೇ ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್ ಕಂಬಳವನ್ನು ನಿಷೇಧ ಮಾಡಿತ್ತು. ಆದರೆ, ನಮ್ಮ ಸರ್ಕಾರ ಆ ನಿಷೇಧವನ್ನು ತೆರವುಗೊಳಿಸಿ ಮತ್ತೊಮ್ಮೆ ಕಂಬಳ ಕ್ರೀಡೆ ನಡೆಸಲು ನೆರವಾಗಿದೆ ಎಂದಿದ್ದಾರೆ.
ಕೋಣ ಸಾಕಿದ ಹಾಗೆ ಮಗನನ್ನು ಸಾಕಲು ಸಾಧ್ಯವಿಲ್ಲ. ಕಂಬಳವನ್ನು ಬೆಳಸಬೇಕು, ಸಂಪ್ರದಾಯವಾದ ಈ ಕ್ರೀಡೆಯನ್ನು ಉಳಿಸಬೇಕು. ತುಳುನಾಡಿನ ಜನ ಕಂಬಳ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ವಿದ್ಯಾವಂತರೂ ಭಾಗವಹಿಸುತ್ತಿದ್ದಾರೆ. ಇದೇ ಕಾರಣದಿಂದ ಕಂಬಳವನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೂಡ ಕಂಬಳ ಕ್ರೀಡೆ ನಡೆದಿತ್ತು. ಅದರಲ್ಲಿ ನಾನು ಭಾಗವಹಿಸಿದ್ದೆ. ಸರ್ಕಾರದಿಂದ ಕಂಬಳಕ್ಕೆ ಒಂದೂವರೆ ಕೋಟಿ ನೀಡಿದ್ದೆ. ಈಗಲೂ 24 ಕಂಬಳ ನಡೆಸಲು ಪ್ರತಿ ಕಂಬಳಕ್ಕೆ 5 ಲಕ್ಷ ರೂ. ಹಣವನ್ನು ಸರ್ಕಾರ ನೀಡಿದೆ. ಇದನ್ನು ಉಳಿಸಿ ಬೆಳೆಸಲು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು. ಎಲ್ಲ ಧರ್ಮ, ಭಾಷೆ, ಸಂಸ್ಕೃತಿಯವರು ಕಂಬಳದಲ್ಲಿ ಪಾಲ್ಗೊಳ್ಳುತ್ತಾರೆ. ನಾವು ಎಲ್ಲರನ್ನೂ ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ದೇಶದ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಕಂಬಳ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ: ಕರಾವಳಿಯ ಪ್ರತಿ ಕಂಬಳಕ್ಕೂ 5 ಲಕ್ಷ ರೂ. ನೀಡಲು ಆದೇಶ
ನಮ್ಮ ಸರ್ಕಾರ ಜಾತಿ-ಜಾತಿಯನ್ನು ಎತ್ತಿಕಟ್ಟುವ ಕೆಲಸ ಮಾಡುವುದಿಲ್ಲ. ನಾವೆಲ್ಲರೂ ಮನುಷ್ಯರು, ನಮ್ಮಲ್ಲಿ ಮನುಷ್ಯತ್ವ ಇರಬೇಕು. ವಿವಿಧತೆಯಲ್ಲಿ ಏಕತೆ ಕಾಣಬೇಕು. ನಾವು 5 ಗ್ಯಾರಂಟಿ ಕಾರ್ಯಕ್ರಮ ಮಾಡಿದ್ದೇವೆ, ಧರ್ಮ ಜಾತಿ ಮೇಲೆ ಆ ಗ್ಯಾರಂಟಿಗಳನ್ನು ಘೋಷಿಸಿಲ್ಲ. ಬಡವರಿಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಶಕ್ತಿ ಯೋಜನೆಯಲ್ಲಿ ಎಲ್ಲರನ್ನು ಫ್ರೀಯಾಗಿ ಬಸ್‌ನಲ್ಲಿ ಕರೆದುಕೊಂಡು ಹೋಗುತ್ತೇವೆ. ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಶಕ್ತಿ ತುಂಬಬೇಕು ಎಂದು ಗೃಹ ಲಕ್ಷ್ಮಿ ಯೋಜನೆಯಡಿ 1 ಕೋಟಿ 21 ಲಕ್ಷ ಕುಟುಂಬಕ್ಕೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿದ್ದೇವೆ. ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ, ಬಡವರಿಗೆ ಶಕ್ತಿ ತುಂಬಿದ್ದೇವೆ ಎಂದಿದ್ದಾರೆ.
ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿದೆ.
ಈ ವೇಳೆ ವಿಧಾನಸಭೆಯ ಸ್ಪೀಕರ್ @utkhader, ಜಿಲ್ಲಾ ಉಸ್ತುವಾರಿ ಸಚಿವ @dineshgrao, ಸಚಿವ ರಹೀಂ ಖಾನ್ ಸೇರಿ ಹಲವು ಪ್ರಮುಖರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. pic.twitter.com/czfO8sqHCr
— Siddaramaiah (@siddaramaiah) January 11, 2025
ಕಂಬಳ ಕ್ರೀಡೆ ಮಾಡುವ ಮೂಲಕ ಜಾತಿ ಧರ್ಮ ಒಗ್ಗೂಡಿಸುವುದು ಸಂತೋಷದ ವಿಚಾರ. ಆಶಾ ಕಾರ್ಯಕರ್ತರಿಗೆ ನೀಡುವ ಸಂಬಳದ ಶೇ. 70ರಷ್ಟು ರಾಜ್ಯ ಸರ್ಕಾರ ಭರಿಸುತ್ತಿದೆ. ಅವರ ವೇತನವನ್ನು 8 ಸಾವಿರದಿಂದ 10 ಸಾವಿರ ಮಾಡುವ ತೀರ್ಮಾನ ಮಾಡಿದ್ದೇವೆ. 10 ಸಾವಿರ ಸಿಗದೇ ಹೋದರೆ ಸರ್ಕಾರ ಭರ್ತಿ ಮಾಡಿಕೊಡುತ್ತೇವೆ. ಕಾಂಗ್ರೆಸ್ ಸರ್ಕಾರ ಎಲ್ಲ ಜನರು ಮುಖ್ಯ ವಾಹಿನಿ ಬರಬೇಕು ಎನ್ನುವ ಪ್ರಯತ್ನ ಮಾಡುತ್ತೇವೆ. ಕಂಬಳ ಕೂಟಕ್ಕೆ ಅತ್ಯಂತ ಸಂತೋಷದಿಂದ ಬಂದಿದ್ದೇನೆ. ನನ್ನನ್ನು ನೋಡಲು ಇಲ್ಲಿ ಯಾರೂ ಬಂದಿಲ್ಲ. ಇಷ್ಟೊಂದು ಜನ ಕಂಬಳ ನೋಡಲು ಬಂದಿರೋದರಿಂದ ಇದು ಎಂತ ಜನಪ್ರಿಯ ಕ್ರೀಡೆ ಅಂತ ಅರ್ಥ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು
ಯು.ಟಿ ಖಾದರ್ ಸ್ಪೀಕರ್ ಆಗಿರಲು ಒಪ್ಪಿರಲಿಲ್ಲ. ನಾವು ಸ್ಪೀಕರ್ ಆಗಲೇಬೇಕು ಅಂತ ಹೇಳಿದ್ದೆ. ಯುಟಿ ಖಾದರ್ ತಮಗೆ ಮಂತ್ರಿ ಪದವಿ ಕೊಡಿ ಅಂದಿದ್ದರು. ಬಹಳ ಜನ ಅವರಿಗೆ ಕನ್ನಡ ಸರಿ ಬರುವುದಿಲ್ಲ ಅಂದಿದ್ದರು. ಆದರೆ, ಈಗ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ರಾಜಕಾರಣದಲ್ಲಿ ಯಾವುದೂ ಪರ್ಮನೆಂಟ್ ಅಲ್ಲ. ನಾನು ಹಾಗೂ ಇಬ್ರಾಹಿಂ ಯು.ಟಿ. ಖಾದರ್‌ಗೆ ಮೊದಲು ಕ್ಯಾಂಪೈನ್ ಮಾಡಿದ್ದೆವು, ಈಗ ಇಬ್ರಾಹಿಂ ನಮ್ಮ ಜೊತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ನೊಗ, ಬೆಳ್ಳಿ ಹಿಡಿಕೆಯ ಕಂಬಳದ ಬೆತ್ತ ನೀಡಿ ಗೌರವ ನೀಡಲಾಯಿತು. ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ನರಿಂಗಾನ ಕಂಬಳ ನಡೆಯುತ್ತಿದೆ. ಈ ಕಂಬಳದಲ್ಲಿ 230ಕ್ಕೂ ಹೆಚ್ಚು ಕೋಣಗಳ ಜೋಡಿ ಭಾಗಿಯಾಗಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ