ಹೊಡೆಯುವ ಅಧಿಕಾರ ಕೊಟ್ಟಿದ್ದು ಯಾರು: ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ಯುಟಿ ಖಾದರ್ ಆಗ್ರಹ
ಅತ್ಯಂತ ಕೆಟ್ಟ ಶಬ್ದಗಳಲ್ಲಿ ಅಸಂಸ್ಕೃತರಂತೆ ಟೀಕೆ ಮಾಡುವುದು ತಾಲಿಬಾನ್ ಸಂಸ್ಕೃತಿ. ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಹೇಳಿದರು.
ಮಂಗಳೂರು: ಬೇರೆಯವರ ಮಕ್ಕಳಿಗೆ ಹೊಡೆಯುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲೇಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಟೀಕೆ, ಅಭಿಪ್ರಾಯ ವ್ಯಕ್ತಪಡಿಸುವುದು ಸ್ವಾಭಾವಿಕ. ಅತ್ಯಂತ ಕೆಟ್ಟ ಶಬ್ದಗಳಲ್ಲಿ ಅಸಂಸ್ಕೃತರಂತೆ ಟೀಕೆ ಮಾಡುವುದು ತಾಲಿಬಾನ್ ಸಂಸ್ಕೃತಿ. ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾಲಿಬಾನಿಗಳಂತೆ ವರ್ತಿಸುತ್ತಿರುವವರು ಬಿಜೆಪಿಗರು ಎಂದು ಬಿಜೆಪಿ ನಾಯಕರ ವಿರುದ್ಧ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಕೆಟ್ಟ ಶಬ್ದಗಳಿಂದ ಬೈಯುವುದು ಸಹ ತಾಲಿಬಾನ್ ಸಂಸ್ಕೃತಿ. ತಾಲಿಬಾನ್ ಎನಿಸಿಕೊಳ್ಳಲು ಗನ್ ಹಿಡಿಯುವ ಅವಶ್ಯಕತೆ ಇಲ್ಲ. ಮತ್ತೊಬ್ಬರಿಗೆ ನೋವಾಗುವಂತೆ ಮಾತನಾಡೋದೂ ತಾಲಿಬಾನ್ ಲಕ್ಷಣ. ಜನರು ರಾಷ್ಟ್ರ ಭಕ್ತಿಯನ್ನು ಬಿಜೆಪಿಯಿಂದ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ನಾನು ಸಚಿವನಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಗಳು ಸರ್ಕಾರಕ್ಕೆ ಹೆದರುತ್ತಿದ್ದರು. ಆಗ ಸಂದೀಪ್ ಪಾಟೀಲ್ ಮಂಗಳೂರು ನಗರ ಕಮೀಷನರ್ ಆಗಿದ್ದರು. ರೌಡಿಗಳನ್ನು ಶೂಟೌಟ್ ಮಾಡಿ ಹದ್ದುಬಸ್ತಿನಲ್ಲಿಟ್ಟಿದ್ದರು. 2008ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಸ್ಥಿತಿ ಇತ್ತು. ಆಗ ಜಿಲ್ಲಾಧಿಕಾರಿಗಳ ಪೊನ್ನುರಾಜ್, ಕಮಿಷನರ್ ಸುಬ್ರಹ್ಮಣ್ಯ ದಿಟ್ಟ ಕ್ರಮ ಕೈಗೊಂಡಿದ್ದರು. ಜಿಲ್ಲೆಯ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಬೇಕು ಎಂದು ಸಲಹೆ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಎಂದಿದ್ದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಪ್ರಸ್ತಾಪಿಸಿದ ಅವರು, ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಯಿದೆ ಎಂದು ಹೇಳಿದರು.
ತಾಲಿಬಾನ್ ಸಂಸ್ಕೃತಿ ಬಿಜೆಪಿಯದ್ದು, ಕಾಂಗ್ರೆಸ್ ಪಕ್ಷದ್ದಲ್ಲ. ದೇವರ ಹೆಸರಲ್ಲಿ ಅಧಿಕಾರಕ್ಕೆ ಬಂದು ದೇವಾಲಯ ಕೆಡವಿದ್ದು ತಾಲಿಬಾನ್ ಸಂಸ್ಕೃತಿ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೇವಾಲಯ ಒಡೆದ ಚರಿತ್ರೆಯಿಲ್ಲ. ಬಿಜೆಪಿ ಅವರು ದೇವಾಲಯ ಕೆಡವಿದ್ದು ಭಯೋತ್ಪಾದನೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಿದವರು ಬಿಜೆಪಿಗರು. ಬಿಜೆಪಿ ನಾಯಕರದ್ದು ತಾಲಿಬಾನ್, ಭಯೋತ್ಪಾದಕ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.
(Congress Leader UT Khader Demands to Curtail Moral Policing)
ಇದನ್ನೂ ಓದಿ: ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಸಿಎಂ ಬೊಮ್ಮಾಯಿ ಇಂಥದ್ದನ್ನ ಸಹಿಸಲ್ಲ ಅಂದಿದ್ದರು, ಈಗೇನಾಯ್ತು? ಖಾದರ್ ಖಾರವಾದ ಪ್ರಶ್ನೆ
ಇದನ್ನೂ ಓದಿ: ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ- ಖಾದರ್ ಸಲಹೆ
Published On - 6:24 pm, Thu, 30 September 21