ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ; ಸಿಎಂ ಬೊಮ್ಮಾಯಿ ಇದ್ದ ಹೋಟೆಲ್‌ಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು
ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಿವಮೊಗ್ಗದ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಲಾಗಿದೆ. ಶಿವಮೊಗ್ಗದ ಸಚಿವ ಈಶ್ವರಪ್ಪ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮಂಗಳೂರು: ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದ ಹೋಟೆಲ್‌ಗೆ ನುಗ್ಗಲು ಯತ್ನಿಸಲಾಗಿದೆ. ಹೋಟೆಲ್‌ನಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ವೇಳೆಯೇ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ. ಮಂಗಳೂರು ನಗರದ ಖಾಸಗಿ ಹೋಟೆಲ್‌ಗೆ ಏಕಾಏಕಿ ನುಗ್ಗಲು ಯತ್ನ ನಡೆದಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನುಗ್ಗಲು ಯತ್ನ ನಡೆಸಲಾಗಿದೆ.
ಏಕಾಏಕಿ ನುಗ್ಗಲು ಯತ್ನಿಸಿದ್ದರಿಂದ ಸ್ಥಳದಲ್ಲಿದ್ದ ಪೊಲೀಸರು ತಬ್ಬಿಬ್ಬಾಗಿದ್ದಾರೆ. ತಕ್ಷಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ತಳ್ಳಾಡಿದ್ದಾರೆ. ಹೋಟೆಲ್ ಬಾಗಿಲಿನಿಂದ ರಸ್ತೆವರೆಗೆ ತಳ್ಳಿಕೊಂಡೇ ಪೊಲೀಸರು ಬಂದಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಿವಮೊಗ್ಗದ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಲಾಗಿದೆ. ಶಿವಮೊಗ್ಗದ ಸಚಿವ ಈಶ್ವರಪ್ಪ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮೈಸೂರಿನ ಲಲಿತ ಮಹಲ್ ಹೋಟೆಲ್ನಲ್ಲಿರುವ ಸಚಿವ ಕೆ.ಎಸ್. ಈಶ್ವರಪ್ಪಗೂ ಭದ್ರತೆ ನೀಡಲಾಗಿದೆ. ಹೋಟೆಲ್ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೆ.ಎಸ್. ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ. ಎಸಿಪಿ, ಇನ್ಸ್ಪೆಕ್ಟೆರ್ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬಿಜೆಪಿ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗಿಯಾಗಿರುವ ಮುಖಂಡರು. ಲಲಿತ ಮಹಲ್ಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಅಷ್ಟೇ ಅಲ್ಲದೆ, ಬೆಳಗಾವಿಯ ಸಂಕಮ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಕೋರ್ ಕಮಿಟಿ ಸಭೆಗೆ ಕಾಂಗ್ರೆಸ್ನಿಂದ ಮುತ್ತಿಗೆಗೆ ಯತ್ನ ನಡೆಸಲಾಗಿದೆ. ಗೇಟ್ ಹೊರಗಡೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಶಾಸಕ ಚೆನ್ನಾರಾಜ್ ಹಟ್ಟಿ ಹೊಳಿಯಿಂದ ಹೋಟೆಲ್‌ಗೆ ಮುತ್ತಿಗೆ ಯತ್ನ ನಡೆದಿದೆ. 50 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕಿ ಈಶ್ವರಪ್ಪ ವಿರುದ್ದ ಘೋಷಣೆ ಕೂಗಲಾಗಿದೆ. ಹೋಟೆಲ್ ಒಳಗೆ ನುಗ್ಗಲು ಯತ್ನಿಸಿ ಗೇಟ್ ಹೊರಗಡೆ ಕುಳಿತುಕೊಂಡೇ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಚೆನ್ನಾರಾಜ್ ಹಟ್ಟಿಹೊಳಿ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರತಿಭಟನೆ, ಹೋಟೆಲ್‌ಗೆ ಮುತ್ತಿಗೆ ಯತ್ನ ಹಿನ್ನೆಲೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಂಧನ ಮಾಡಲಾಗಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕಿ ಮತ್ತು ಕಾರ್ಯಕರ್ತರ ಬಂಧಿಸಲಾಗಿದೆ. ಕಾಂಗ್ರೆಸ್ ಪ್ರತಿಭಟನೆಗೆ ವಿರುದ್ದವಾಗಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಯಾಗಿ ಘೋಷಣೆ ಕೂಗಲಾಗಿದೆ.
ಪತಿ ಸಂತೋಷ್ ಪಾಟೀಲ್ದು ಆತ್ಮಹತ್ಯೆಯಲ್ಲ, ಇದು ಕೊಲೆ
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಹಿನ್ನೆಲೆ ಪತ್ನಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪತಿ ಸಂತೋಷ್ ಪಾಟೀಲ್ದು ಆತ್ಮಹತ್ಯೆಯಲ್ಲ, ಇದು ಕೊಲೆ. ನನ್ನ ಪತಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಪತಿ ಸಂತೋಷ್ ಪಾಟೀಲ್ ನಿನ್ನೆ ನನ್ನ ಜತೆ ಚೆನ್ನಾಗಿಯೇ ಮಾತಾಡಿದ್ದರು. ಇವತ್ತು ಪತಿ ಇಲ್ಲ ಅಂದ್ರೆ ಹೇಗೆ? ಇದಕ್ಕೆಲ್ಲ ಸಚಿವ ಈಶ್ವರಪ್ಪನೇ ಕಾರಣ. ನನ್ನ ಪತಿ ಸಂತೋಷ್ ಸಾಲಸೋಲ ಮಾಡಿ ರಸ್ತೆ ಕಾಮಗಾರಿ ಮಾಡಿದ್ದರು. ಇವಾಗ ನನಗೆ ಸಂತೋಷ್ ಪರಿಚಯವೇ ಇಲ್ಲವೆಂದು ಈಶ್ವರಪ್ಪ ಹೇಳ್ತಾರೆ. ನಮಗೆ ದುಡ್ದು ಹೆಚ್ಚಾಗಿದೆಯಾ ಸಾರ್ವಜನಿಕ ರಸ್ತೆ ಕೆಲಸ ಮಾಡಿಸಲು? ಸಚಿವ ಈಶ್ವರಪ್ಪಗೆ ಪರಿಚಯ ಇಲ್ಲ ಅಂದ್ರೆ ಫೋಟೋ ಎಲ್ಲಿಂದ ಬಂದವು. ನನ್ನ ಗಂಡ ಸಂತೋಷ್ ಬಿಜೆಪಿ ಬಿಜೆಪಿ ಎಂದು ಜೀವವನ್ನೇ ಕಳೆದುಕೊಂಡ. ನಾನು 2 ವರ್ಷದ ಮಗು ಕಟ್ಟಿಕೊಂಡು ಮುಂದೆ ಹೇಗೆ ಜೀವನ ನಡೆಸಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಜೆ ಒಳಗಾಗಿ ಕೆಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ
ಇದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ
Published On - 6:05 pm, Tue, 12 April 22