ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಬಕ್ರಿದ್ಗೆ(Bakrid) ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಜೂನ್ 29ರಂದು ಬಕ್ರೀದ್ ಆಚರಿಸಲಾಗುತ್ತಿದ್ದು ಮುಸ್ಲಿಮರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕುರಿಗಳ ಮಾರಾಟ ಹೆಚ್ಚಾಗಿದೆ. ಇನ್ನು ಬಕ್ರಿದ್ ಹಿನ್ನೆಲೆ ಕುರ್ಬಾನಿ ಹೆಸರಿನಲ್ಲಿ ಸಾವಿರಾರು ಗೋವುಗಳ ಮಾರಣ ಹೋಮ ಆಗುವ ಸಾಧ್ಯತೆ ಇದೆ ಎಂದು ಬಜರಂಗದಳ(Bajrang Dal) ಆತಂಕ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್, ಗೋವಂಶ ಹತ್ಯೆಯ ಬಗ್ಗೆ ಆತಂಕ ಹೊರ ಹಾಕಿದ್ದಾರೆ. ಕುರ್ಬಾನಿಗೆ ತಯಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ರಾಜ್ಯ ಸರ್ಕಾರ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಗೋಸಾಗಾಣಿಕೆ, ಗೋವುಗಳ ಬಲಿಯನ್ನು ತಡೆಯಬೇಕು. ಇಂದಿನಿಂದ ಜೂನ್ 30 ರವರೆಗೆ ಚೆಕ್ ಪೋಸ್ಟ್ ತೆರೆಯಬೇಕು. ಗೋಸಾಗಾಟ ತಡೆಯಲು ವಿಶೇಷ ಪೊಲೀಸ್ ತಂಡ ರಚಿಸಬೇಕು ಎಂದು ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ 2 ಕೋಮಿನ ಯುವಕರ ನಡುವೆ ಗಲಾಟೆ ಆಗಿದ್ಯಾಕೆ? ಕಾರಣ ಬಿಚ್ಚಿಟ್ಟ ಎಸ್ಪಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಕುದ್ರುಬೆಟ್ಟುವಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಹಸುಗಳನ್ನು ವಶಕ್ಕೆ ಪಡೆಯಲಾಗಿದೆ. ಕರಿಕಲ್ಕಟ್ಟೆಯ ಚಂದ್ರ ಶೆಟ್ಟಿ (55), ಗುಡ್ಡೆಯಂಗಡಿ ನಿವಾಸಿ ಅಣ್ಣಪ್ಪ (65) ಬಂಧಿತ ಅರೋಪಿಗಳು. ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ನಾಸೀರ್ ಹುಸೇನ್ ಖಚಿತ ಮಾಹಿತಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಕುಂದಾಪುರ ಕಡೆಗೆ ಸಾಗುತ್ತಿದ್ದರು ಎಂಬ ಮಾಹಿತಿ ಸಿಕ್ಕಿದ್ದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ