ದಕ್ಷಿಣ ಕನ್ನಡದಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆ: ಶೇ.84ರಷ್ಟು ಹುದ್ದೆಗಳು ಖಾಲಿ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು, ಮಂಜೂರಾದ ಒಟ್ಟು ಹುದ್ದೆಗಳ ಪೈಕಿ ಬರೋಬ್ಬರಿ ಶೇ. 84ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಕೇವಲ ಶೇ. 16ರಷ್ಟು ಸಿಬ್ಬಂದಿಯೊಂದಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ರೈತರು ಹಾಗೂ ಜಾನುವಾರು ಸಾಕಣೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ದಕ್ಷಿಣ ಕನ್ನಡದಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆ: ಶೇ.84ರಷ್ಟು ಹುದ್ದೆಗಳು ಖಾಲಿ!
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 11, 2026 | 5:45 PM

ಮುಖ್ಯಾಂಶಗಳು

  • ದಕ್ಷಿಣ ಕನ್ನಡದಲ್ಲಿ ಲಭ್ಯವಿಲ್ಲ ಅಗತ್ಯ ಪಶುಪಾಲನಾ ಇಲಾಖೆ ಸಿಬ್ಬಂದಿ
  • ಮಂಜೂರಾದ ಪೈಕಿ ಖಾಲಿ ಬಿದ್ದಿರುವ ಶೇ.84ರಷ್ಟು ಹುದ್ದೆಗಳು
  • ಸುಮಾರು 10 ಪಶುವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸದ ಸ್ಥಿತಿಗೆ

ಮಂಗಳೂರು, ಆಗಸ್ಟ್​​ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಮಂಜೂರಾದ ಒಟ್ಟು ಸಿಬ್ಬಂದಿ ಹುದ್ದೆಗಳ ಪೈಕಿ ಕೇವಲ ಶೇ.16ರಷ್ಟು ಹುದ್ದೆಗಳಲ್ಲಷ್ಟೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 449 ಹುದ್ದೆಗಳು ಮಂಜೂರಾಗಿದ್ದು, 377 ಹುದ್ದೆಗಳು ಖಾಲಿ ಇವೆ.ಪಶುವೈದ್ಯಾಧಿಕಾರಿಗಳಿಗಾಗಿ ಮಂಜೂರಾಗಿರುವ 74 ಹುದ್ದೆಗಳ ಪೈಕಿ 44 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಯೇ ಇಲ್ಲದ ಕಾರಣ ಜಿಲ್ಲೆಯಲ್ಲಿ ಸುಮಾರು 10 ಪಶುವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸದ ಸ್ಥಿತಿಗೆ ತಲುಪಿದೆ.

ಆಸ್ಪತ್ರೆಗಳನ್ನು ನಿರ್ವಹಣೆ ಕಷ್ಟಕರ

ಮಂಜೂರಾದ ಬಹುತೇಕ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲೆಯ ಸುಮಾರು 110 ಪಶುವೈದ್ಯಕೀಯ ಆಸ್ಪತ್ರೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಡಿ ಗ್ರೂಪ್‌ ನೌಕರರ 170 ಹುದ್ದೆಗಳು ಮಂಜೂರಾಗಿವೆ. ಆದರೆ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 168 ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ

ವೈದ್ಯರು, ಜಾನುವಾರುಗಳ ಪರಿಶೀಲಕರ ಕೊರತೆ

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕ ಡಾ. ಅರುಣ್‌ ಕುಮಾರ್‌ ಶೆಟ್ಟಿ ಅವರು ತಿಳಿಸಿದಂತೆ, ಇಲಾಖೆಯಲ್ಲಿ ವೈದ್ಯರು ಹಾಗೂ ಜಾನುವಾರುಗಳ ಪರಿಶೀಲಕರ ಕೊರತೆ ಇದೆ. 2024-25ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 13 ವೈದ್ಯರನ್ನು ನೇಮಕ ಮಾಡಲಾಗಿತ್ತು. ಆದರೆ ಪ್ರಸ್ತುತ ನಾಲ್ವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಎರಡು ಖಾಸಗಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ 95 ಡಿ ಗ್ರೂಪ್‌ ನೌಕರರನ್ನು ಇಲಾಖೆ ನೇಮಕ ಮಾಡಿಕೊಂಡಿದೆ. ಮೊಬೈಲ್‌ ಪಶುವೈದ್ಯಕೀಯ ಚಿಕಿತ್ಸಾಲಯಗಳ ನಿರ್ವಹಣೆಗಾಗಿ ಚಾಲಕರನ್ನೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಇದೇ ರೀತಿ ದತ್ತಾಂಶ ನಮೂದು ನಿರ್ವಾಹಕರನ್ನೂ ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ, ಜೈಲ್‌ ರಸ್ತೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕರ ಕಚೇರಿಗಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 4.1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಮತ್ತೊಂದೆಡೆ ಜಿಲ್ಲಾ ಕೇಂದ್ರದ ಕಚೇರಿಯು 1973ರಲ್ಲಿ ನಿರ್ಮಿಸಲಾಗಿರುವ ಹಳೆಯ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ದಿ ಟೈಮ್​ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us