ದಕ್ಷಿಣಕನ್ನಡ : ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಸಿ ಜಿಲ್ಲಾಡಳಿತ ಆದೇಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆ ಆಗಸ್ಟ್ 6ರವರೆಗು ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆ ಆಗಸ್ಟ್ 6ರವರೆಗು ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಅಂಗಡಿ, ಮದ್ಯದಂಗಡಿಗಳನ್ನು ಮುಚ್ಚುವ ಆದೇಶವೂ ಮತ್ತೆರಡು ದಿನ ಮುಂದುವರೆಯಲಿದೆ.
ಶಾಂತಿ ಸಭೆ
ಜಿಲ್ಲೆಯಲ್ಲಿ ಸರಣಿ ಹತ್ಯೆಗಳ ಬಳಿಕ ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ನಿನ್ನೆ (ಜುಲೈ 30) ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಜನಪ್ರತನಿಧಿಗಳು ಪ್ರಚೋಧನಕಾರಿ ಭಾಷಣ ನಿಲ್ಲಿಸುವಂತೆ ಹಾಗೂ ಮಾಧ್ಯಮಗಳಲ್ಲಿ ಕರಾವಳಿಯಲ್ಲಿ ಬೆಂಕಿ, ಕೊತಕೊತ ಎಂಬಿತ್ಯಾದಿ ರೀತಿಯಲ್ಲಿ ಸುದ್ದಿವಾಹಿನಿಗಳ ಡಿಬೇಟ್ಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಪ್ರಚೋದನಕಾರಿ ಸಂದೇಶಗಳ ರವಾನೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮನವಿ ಮಾಡಿದ್ದಾರೆ.
ಶಾಂತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇಲ್ಲದಿರುವುದನ್ನು ಗಮನಿಸಿದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. ತಳಮಟ್ಟದ ಜನಪ್ರತಿನಿಧಿಗಳು ಇಲ್ಲ. ನಾವು ಹೋಗಿ ಊರಿನಲ್ಲಿ ಹೇಳಿದರೆ ಯಾರೂ ಕೇಳುವುದಿಲ್ಲ. ಜನಪ್ರತಿನಿಧಿಗಳು ಹೇಳಿದರೆ ಕೇಳುತ್ತಾರೆ. ಆದರೆ ಶಾಂತಿ ಸಭೆಯಲ್ಲಿ ಅವರೇ ಇಲ್ಲ. ಮೊದಲು ಅವರನ್ನು ಕರೆದು ಶಾಂತಿ ಸಭೆ ನಡೆಸಿ ಎಂದು ಸಭೆಯಲ್ಲಿ ನೆರೆದಿದ್ದವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಸಿಎಎ ವಿಚಾರದಲ್ಲಿ ಗಲಭೆ ಆದಾಗ ತಕ್ಷಣ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಯಿತು, ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಇದೇ ರೀತಿ ಈಗ ಕೂಡ ಮಾಡಬೇಕಿದೆ. ಪ್ರಚೋದಮಕಾರಿ ಸಂದೇಶಗಳು ರವಾನಿಸುವುದನ್ನು ತಡೆಯಲು ಮುಂದಿನ ಎರಡು ದಿನಗಳ ಕಾಲ ಇಂಟರ್ನೆಟ್ ಬಂದ್ ಮಾಡುವಂತೆ ಮಿಥುನ್ ರೈ ಮನವಿ ಮಾಡಿದರು.
ಪ್ರಮುಖ ಮುಸ್ಲಿಂ ಸಂಘಟನೆಗಳು ಗೈರು
ಶಾಂತಿ ಸಭೆಗೆ ಪ್ರಮುಖ ಮುಸ್ಲಿಂ ಸಂಘಟನೆಗಳು ಗೈರಾಗಿರುವುದು ಕಂಡುಬಂದಿವೆ. ಈ ಬಗ್ಗೆ ಬೊಟ್ಟು ಮಾಡಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೋ, ಪ್ರಮುಖ ಮುಸ್ಲಿಂ ಸಂಘಟನೆಗಳು ಗೈರಾಗಲು ಕಾರಣ ಮುಖ್ಯಮಂತ್ರಿಗಳ ತಾರತಮ್ಯ. ಕೇವಲ ಪ್ರವೀಣ್ ನೆಟ್ಟಾರು ಅವರ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಆದರೆ ಅಲ್ಲೇ ಸಮೀಪದ ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಪ್ರವೀಣ್ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದ್ದಾರೆ. ಇದಕ್ಕಾಗಿ ಪ್ರಮುಖ ಮುಸ್ಲಿಂ ಸಂಘಟನೆ ಭಾಗವಹಿಸಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ಡ್ರಗ್ಸ್ ಮತ್ತು ಗಾಂಜಾ ಮಾಫೀಯಾ ನಿಲ್ಲಿಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ. ಮಂಗಳೂರು ಅಪರಾಧದ ಜಿಲ್ಲೆಯಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಹಾಳಾಗಿದೆ. ಎಲ್ಲಾ ಕಡೆ ಸೆಕ್ಷನ್ 144 ಹಾಕಿ ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.
ಜಾಗೃತರಾಗಿರಿ ಎಂದು ಪೊಲೀಸರನ್ನು ಎಚ್ಚರಿಸಿದ ವ್ಯಕ್ತಿ
ಶಾಂತಿ ಸಭೆಯಲ್ಲಿ ಭಾಗೀಯಾದ ಉಪ್ಪಿನಂಗಡಿ ವ್ಯಕ್ತಿಯೊಬ್ಬರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾಗ ಪೊಲೀಸರನ್ನು ಜಾಗೃತರಾಗಿರಿ ಎಂದು ಎಚ್ಚರಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳೇ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ಮಾತನಾಡಿ, ಕೊಲೆ ನಡೆದ ತಕ್ಷಣ ಅದರ ಕಾರಣದ ಬಗ್ಗೆ ಸುಳ್ಳು ಮಾಹಿತಿ ಹೋಗಿದೆ. ಫಾಝಿಲ್ ಕೊಲೆಯಲ್ಲಿ ಲವ್ ಇತ್ತು ಅಂತಾ ಕೆಲ ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿತ್ತು. ಇಂತಹ ಸುಳ್ಳು ಸುದ್ದಿಗಳಿಂದ ಶಾಂತಿ ಭಂಗ ಆಗುತ್ತದೆ. ಈ ರೀತಿ ಸುದ್ದಿ ಮಾಡಿವವರ ಮೇಲೆ ಸುಮೋಟೊ ಕೇಸ್ ಹಾಕುವಂತೆ ಮನವಿ ಮಾಡಿದರು.
Published On - 7:41 pm, Sun, 31 July 22