ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಡಿಕೆ ಶಿವಕುಮಾರ್‌ಗೆ ವಾರಂಟ್ ಜಾರಿಯಾಗಿದೆ. ಸೆಪ್ಟೆಂಬರ್ 29ರಂದು ಡಿಕೆ ಶಿವಕುಮಾರ್ರನ್ನು ಕೋರ್ಟ್‌ಗೆ ಹಾಜರು ಪಡಿಸುವಂತೆ ಡಿಜಿ & ಐಜಿಪಿಗೆ ನೋಟಿಸ್ ನೀಡಲಾಗಿದೆ.
ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಬಳ್ಳಾರಿಯ ಸಾಯಿ ಗಿರಿಧರ್ ಮತ್ತು ಡಿಕೆಶಿ ಫೋನಿನಲ್ಲಿ ಮಾತನಾಡುವಾಗ ಇಬ್ಬರ ಮಧ್ಯೆ ಮಾತಿನಚಕಮಕಿ ನಡೆದಿತ್ತು. ಆಗ ಡಿಕೆ ಶಿವಕುಮಾರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಡಿಕೆ ಶಿವಕುಮಾರ್ ದೂರು ಆಧರಿಸಿ ಗಿರಿಧರ್ ರೈನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಡಿಕೆಶಿ ಬರಬೇಕಾಗಿತ್ತು. ಆದರೆ ಹಲವು ಬಾರಿ ನೋಟಿಸ್ ನೀಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ವಾರಂಟ್ ಜಾರಿ ಮಾಡಲಾಗಿದೆ.
ಏನೀ ಪ್ರಕರಣ?
ಸ್ಥಳೀಯವಾಗಿ ನಿರಂತರ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಬೆಳ್ಳಾರೆಯ ವರ್ತಕ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಆರೋಪಿಸಲಾಗಿದ್ದು, ಇದು ಡಿಕೆ ಶಿವಕುಮಾರ್ ಅವರು ಕೋಪಗೊಳ್ಳಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸಚಿವ ಡಿಕೆ ಶಿವಕುಮಾರ್ ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಪ್ರಭಾರ ಎಇಇ ಹರೀಶ್ ನಾಯಕ್ ಅವರಿಂದ ಸಾಯಿ ಗಿರಿಧರ್ ವಿರುದ್ಧ ಪೊಲೀಸರಿಗೆ ದೂರು ನೀಡಿಸಿದ್ದರು. ಈ ಪ್ರಕರಣ ಸಂಬಂಧ ಬೆಳ್ಳಾರೆ ಪೊಲೀಸರು ಗಿರಿಧರ್ ರೈ ಅವರನ್ನು ಬಂಧಿಸಿದ್ದರು.
Published On - 9:20 am, Wed, 15 September 21