ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಿಜೆಪಿಗಿಂತ ಹೆಚ್ಚು ಮತ, ಆದರೆ ಗೆದ್ದ ಅಭ್ಯರ್ಥಿಗಳಲ್ಲಿ ಅವರ ಸಂಖ್ಯೆ ಹೆಚ್ಚು: ಡಿಕೆ ಶಿವಕುಮಾರ್

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗಳಿಸಿದ ಮತಗಳ ಸಂಖ್ಯೆ ಹೆಚ್ಚು. ಆದರೆ ಗೆಲುವು ಸಾಧಿಸಿದ ಅಭ್ಯರ್ಥಿಗಳಲ್ಲಿ ಬಿಜೆಪಿಯವರ ಸಂಖ್ಯೆ ಹೆಚ್ಚು. ಏನು ಮಾಡೋಣ?

ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಿಜೆಪಿಗಿಂತ ಹೆಚ್ಚು ಮತ, ಆದರೆ ಗೆದ್ದ ಅಭ್ಯರ್ಥಿಗಳಲ್ಲಿ ಅವರ ಸಂಖ್ಯೆ ಹೆಚ್ಚು: ಡಿಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗಳಿಸಿದ ಮತಗಳ ಸಂಖ್ಯೆ ಹೆಚ್ಚು. ಆದರೆ ಗೆಲುವು ಸಾಧಿಸಿದ ಅಭ್ಯರ್ಥಿಗಳಲ್ಲಿ ಬಿಜೆಪಿಯವರ ಸಂಖ್ಯೆ ಹೆಚ್ಚು. ಏನು ಮಾಡೋಣ? ರಾಜಕೀಯದಲ್ಲಿ 49 ಬಂದ್ರೂ ಸೊನ್ನೆ, 50 ಬಂದ್ರೆ ನೂರು. ಸಂಖ್ಯೆಗಳ ಲೆಕ್ಕದಲ್ಲಿ ನಾವು ಸೋತಿದ್ದೇವೆ. ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲು ವಿಫಲವಾದ ಬಗ್ಗೆ ಪರಾಮರ್ಶೆ ನಡೆಸಲು ನಗರಕ್ಕೆ ಬಂದಿದ್ದ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಎಐಸಿಸಿ ಸಹ ಪಾಲಿಕೆಯಲ್ಲಿ ಕಾಂಗ್ರೆಸ್​ ಪಕ್ಷದ ವೈಫಲ್ಯವನ್ನು ಗಮನಿಸಿದೆ. ಪರಾಮರ್ಶೆಗಾಗಿ ವಿಶೇಷ ತಂಡವು ಬರಲಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂಬ ಬಗ್ಗೆ ಅಭ್ಯರ್ಥಿಗಳ ಜೊತೆಗೆ ಮಾತಾಡಿ, ಕಾರ್ಯಯೋಜನೆ ರೂಪಿಸುತ್ತೇವೆ. ಈ ಬಾರಿ ನಮ್ಮ ಪಕ್ಷ 43 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಮುಂದಿನ ಚುನಾವಣೆಗಳಲ್ಲಿ ಎಲ್ಲ ಸ್ಥಾನಗಳಲ್ಲಿಯೂ ಸ್ಪರ್ಧಿಸುತ್ತೇವೆ ಎಂದರು.

ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಚುನಾವಣೆ ಆಯೋಗವು ತಪ್ಪು ಮತದಾರರ ಯಾದಿಯನ್ನು ನೀಡಿ ತೊಂದರೆ ಮಾಡಿತು. ಎಷ್ಟೋ ಮತದಾರರು ಹೆಸರುಗಳು ಇರಲಿಲ್ಲ ಎಂದು ದೂರಿದರು. ನಮಗೆ ತಪ್ಪು ಯಾದಿ ಕೊಟ್ಟ ಆಯೋಗವು ಬಿಜೆಪಿಯವರಿಗೆ ಸರಿಯಾದ ಯಾದಿ ಕೊಟ್ಟಿತ್ತು. ಮತಗಟ್ಟೆಗೆ ಬಂದ ಮತದಾರರನ್ನು ನಿಮ್ಮ ಹೆಸರು ಇಲ್ಲಿಲ್ಲ, ಬೇರೆ ಕಡೆಗೆ ಹೋಗಿ ಎಂದು ಹೇಳಿದರೆ ಸಮಸ್ಯೆಯಾಗುತ್ತೆ. ಈ ಬಗ್ಗೆ ನಮ್ಮ ಕೆಲ ಅಭ್ಯರ್ಥಿಗಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬೂತ್​ ಹಂತದ ಕಾರ್ಯಕರ್ತರು ಇಂಥ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಪ್ರತಿಭಟನೆ
ದೇಶದಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ದರಗಳು ಇಳಿಯುತ್ತಿಲ್ಲ. ಇದನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಕ್ಕಡಿ ಗಾಡಿಯಲ್ಲಿ ವಿಧಾನಸೌಧಕ್ಕೆ ಹೋಗುವ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಟ್ರಾಫಿಕ್​ಗೆ ತೊಂದರೆಯಾಗದಂತೆ ಗಮನಹರಿಸುತ್ತೇವೆ ಎಂದು ತಿಳಿಸಿದರು.

ಅಮೃತ ಮಹೋತ್ಸವ ಪ್ರಯುಕ್ತ ಅಕ್ಟೋಬರ್ ತಿಂಗಳಲ್ಲಿ ಸಭೆ, ಪ್ರತಿಭಟನೆ
ಇದು 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ನಮ್ಮ ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ಸಭೆಗಳನ್ನು ನಡೆಸುತ್ತಾರೆ. ನಗರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ಕಾರ್ಯಕ್ರಮವನ್ನು ಗಮನಿಸಲು ಜಿಲ್ಲಾ ಕಾಂಗ್ರೆಸ್​ನಿಂದ ವೀಕ್ಷಕರನ್ನು ನೇಮಿಸಲಾಗುವುದು. ಕೆಪಿಸಿಸಿ ಕಡೆಯಿಂದ ಪ್ರತಿ ಬ್ಲಾಕ್​ಗೆ ವೀಕ್ಷಕರನ್ನು ಕಳಿಸಿಕೊಡಲಾಗುವುದು. ಗ್ರಾಮ ಪಂಚಾಯಿತಿಗಳ ಸಮಸ್ಯೆ, ಅಲ್ಲಿನ ಜನರ ನೋವು? ಪರಿಹಾರಕ್ಕೆ ಏನೆಲ್ಲಾ ಆಗಬೇಕು ಎಂಬ ಬಗ್ಗೆ ಈ ಸಭೆಗಳಲ್ಲಿ ಚರ್ಚೆಯಾಗಲಿದೆ. ಕೆಲ ಪಂಚಾಯಿತಿಗಳಿಗೆ ಸರ್ಕಾರದಿಂದ ಅನುದಾನ ಸಿಕ್ಕಿದೆ, ಕೆಲ ಪಂಚಾಯಿತಿಗಳಿಗೆ ಅನುದಾನ ಸಿಕ್ಕಿಲ್ಲ. ಈ ಅಂಶವನ್ನು ನಮ್ಮ ಕಾರ್ಯಕರ್ತರು ಮಾತಾಡಬೇಕು ಎಂದು ಸಲಹೆ ಮಾಡಿದರು. ಕಾಂಗ್ರೆಸ್​ ಪಕ್ಷದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯಿಂದ ಘೋಷಿಸುತ್ತಿದ್ದೇನೆ. ಗಾಂಧೀಜಿ ಸಹ ಇಲ್ಲಿಗೆ ಬಂದು ಅಧಿವೇಶನ ಮಾಡಿದ್ದರು ಎಂದು ನೆನಪಿಸಿಕೊಂಡರು.

ಗುಜರಾತ್ ಮುಖ್ಯಮಂತ್ರಿ ಬದಲಾವಣೆಗೆ ದುರಾಡಳಿತ ಕಾರಣ
ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸಲಾಗಿದೆ. ಆಡಳಿತ ಸರಿಯಿಲ್ಲ, ಹಣ ದುರುಪಯೋಗ ಆಗಿದೆ ಎಂಬುದು ಇದಕ್ಕೆ ಮುಖ್ಯ ಕಾರಣ. ದೇಶ ಮತ್ತು ಹಲವು ರಾಜ್ಯಗಳಲ್ಲಿ ಆಡಳಿತ ಸರಿಯಿಲ್ಲ ಅನ್ನೋದಕ್ಕೆ ಮುಖ್ಯಮಂತ್ರಿ ಬದಲಾವಣೆಯೇ ಸಾಕ್ಷಿ ಎಂದು ಹೇಳಿದರು.

ಬಣ ರಾಜಕೀಯ ನಮ್ಮಲ್ಲಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯವಿಲ್ಲ. ನಮ್ಮದು ಒಂದೇ ಬಣ, ಅದು ಕಾಂಗ್ರೆಸ್ ಬಣ. ಈ ಬಗ್ಗೆ ಸತೀಶ್ ಜಾರಕಿಹೊಳಿ ಏನು ಹೇಳಿದ್ದಾರೆ ಗೊತ್ತಿದೆ. ಅವರ ಅಭಿಪ್ರಾಯವನ್ನು ಗೌರವಿಸ್ತೇನೆ. ಆದರೆ ನನ್ನ ಅಭಿಪ್ರಾಯ ಬೇರೆಯದ್ದೇ ಆಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಅರ್ಜಿ ಜೊತೆ 1 ಲಕ್ಷ ಕೊಡಿ
ಸಂಸತ್ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಿದ್ಧತೆ ಆರಂಭಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯಿರುವವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಅರ್ಜಿ ಕಳಿಸಬೇಕು. ಅರ್ಜಿಯೊಂದಿಗೆ ಪಕ್ಷದ ಕಚೇರಿ ನಿಧಿಗೆ ₹ 1 ಲಕ್ಷ ದೇಣಿಗೆ ಕೊಡಬೇಕು. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೂ ಅರ್ಜಿ ಜೊತೆಗೆ ₹ 10 ಸಾವಿರ ಕೊಟ್ಟಿದ್ದರು. ಈ ಹಣವನ್ನು ಆಯಾ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.

ತಮಗೆ ಆಮಿಷ ಒಡ್ಡಿದ್ದ ಬಗ್ಗೆ ಶ್ರೀಮಂತ ಪಾಟೀಲರು ಮಾಡಿರುವ ಆರೋಪವನ್ನು ಎಸಿಬಿಯವರು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಆಮಿಷ ಒಡ್ಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

(KPCC President DK Shivakumar on BJP Win in Belagavi Mahanagara Palike)

ಇದನ್ನೂ ಓದಿ: ಕಲಬುರಗಿ ಪಾಲಿಕೆ ವಿಚಾರ: ದೇವೇಗೌಡರಿಗೆ ಕರೆ ಮಾಡಿ ಚರ್ಚಿಸಿದ್ದು ನಿಜ; ಉತ್ತರಕ್ಕೆ ಕಾಯುತ್ತಿದ್ದೇವೆ: ಮಲ್ಲಿಕಾರ್ಜುನ ಖರ್ಗೆ

ಇದನ್ನೂ ಓದಿ: Ganesh Chaturthi: ಗಣೇಶನ ಮೂರ್ತಿಗೆ ಎತ್ತರ ನಿಗದಿ ಮಾಡಿರುವ ಆದೇಶ ಹಿಂಪಡೆಯಿರಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯ

Click on your DTH Provider to Add TV9 Kannada