
ಮಂಗಳೂರು, ಅಕ್ಟೋಬರ್ 6: ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ (Dharmasthala Case) ಸುಜಾತಾ ಭಟ್ – ಅನನ್ಯ ಭಟ್ ಕಟ್ಟುಕತೆ ಪ್ರಕರಣದಲ್ಲಿ ಹೊಸ ತಿರುವು ಕಾಣಿಸಿಕೊಂಡಿದೆ. ದಕ್ಷಿಣ ಭಾರತದ ಖ್ಯಾತ ನಟ, ಖಳನಾಯಕ ಹಾಗೂ ನಿರ್ದೇಶಕನ ಸಹೋದರನ (ಆತನೂ ಕಾಲಿವುಡ್ ನಟ) ವಿರುದ್ಧ ಶೀಘ್ರದಲ್ಲೇ ಎಸ್ಐಟಿ (SIT) ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ತನಿಖೆಯ ವೇಳೆ ಎಸ್ಐಟಿಗೆ ಆ ನಟನ ಹೆಸರು ಸಿಕ್ಕಿದ್ದು, ಅದರ ಹಿನ್ನೆಲೆಯಲ್ಲಿ ಆತನ ಚೆನ್ನೈ ವಿಳಾಸ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಸುಜಾತ ಭಟ್ ಕಟ್ಟುಕಥೆ ಮತ್ತು ಕೊಡಗು ಮೂಲದ ವಾಸಂತಿ ಪ್ರಕರಣದ ಜಾಡು ಹಿಡಿದ ಎಸ್ಐಟಿಗೆ ಖ್ಯಾತ ನಟನ ಲಿಂಕ್ ಬಗ್ಗೆ ಮಾಹಿತಿ ದೊರೆತಿದೆ. ಕೊಡಗು ಮೂಲದ ವಾಸಂತಿ ಮದುವೆ ಆಗಿ ಬೆಂಗಳೂರಿನಲ್ಲಿದ್ದರು. ವಾಸಂತಿ ಅವರ ಗಂಡ ಹಾಗೂ ಆ ನಟ ಇಬ್ಬರೂ ಸ್ನೇಹಿತರಾಗಿದ್ದರು. ಬೆಂಗಳೂರಿನ ಆ ಮನೆಗೆ ಆಗಾಗ ಆ ಪ್ರಖ್ಯಾತ ನಟನ ತಮ್ಮ ಬರುತ್ತಿದ್ದ. ವಾಸಂತಿ ಗಂಡನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ವಾಸಂತಿ ದಾಂಪತ್ಯ ರಹಸ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆ ನಟನಿಗೆ ಅರಿವು ಇತ್ತು. ವಾಸಂತಿ ಹಾಗೂ ಆಕೆ ಪತಿ ಜೊತೆ ಆ ನಟ ತುಂಬಾ ಅನ್ಯೋನ್ಯವಾಗಿದ್ದ ಎಂಬ ಮಾಹಿತಿ ಎಸ್ಐಟಿಗೆ ದೊರೆತಿರುವುದಾಗಿ ಮೂಲಗಳು ತಿಳಿಸಿವೆ.
ಸದ್ಯ ಚೆನ್ನೈ ಬೀಚ್ ಪ್ರದೇಶದ ಆಸುಪಾಸಿನಲ್ಲಿ ಆ ಖ್ಯಾತ ನಟ ವಾಸವಿದ್ದಾನೆ ಎನ್ನಲಾಗಿದ್ದು, ಎಸ್ಐಟಿ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ. ವಿಳಾಸ ದೃಢಪಡಿಸಲು ಪ್ರಯತ್ನ ನಡೆಯುತ್ತಿದ್ದು, ಅದರಲ್ಲಿ ವಿಳಂಬವಾಗಿರುವ ಕಾರಣ ನೋಟಿಸ್ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮುಂದುವರಿದಿದ್ದು, ಆ್ಯಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಶನಿವಾರ ಸಂಜೆ 7.30ರವರೆಗೂ ಇವರನ್ನು ವಿಚಾರಣೆ ನಡೆಸಿದ್ದ ಎಸ್ಐಟಿ, ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಶವಗಳನ್ನು ಸಾಗಿಸಿದ್ದ ಪ್ರಕರಣದ ಕುರಿತಂತೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿತ್ತು. ಈ ಇಬ್ಬರು ಚಾಲಕರಿಂದ ದೊರೆತ ಮಾಹಿತಿಯು ತನಿಖೆಗೆ ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿತ್ತು ಎಂಬ ಆರೋಪ ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜ್ಯ ಸರ್ಕಾರ ತನಿಖೆಗಾಗಿ ಎಸ್ಐಟಿ ರಚನೆ ಮಾಡಿತ್ತು. ಸುಜಾತಾ ಭಟ್ ಎಂಬವರು ತಮ್ಮ ಮಗಳು, ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ 2003 ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಳು. ಅವಳ ಅಸ್ಥಿಪಂಜರವನ್ನಾದರೂ ಹುಡುಕಿಕೊಡಿ ಎಂದು ಎಸ್ಐಟಿಗೆ ಮನವಿ ಮಾಡಿದ್ದರು. ಬಳಿಕ ಸುಜಾತ ಭಟ್ ಆಸ್ತಿ ವಿಚಾರಕ್ಕೆ ಮಗಳ ಬಗ್ಗೆ ಕಥೆ ಕಟ್ಟಿರುವುದಾಗಿ ಒಪ್ಪಿಕೊಂಡು ವೀಡಿಯೊ ಬಿಡುಗಡೆ ಮಾಡಿದ್ದರು. ತನ್ನ ಅಜ್ಜನ ಭೂಮಿ ಮತ್ತು ಧರ್ಮಸ್ಥಳ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿ ವಿವಾದದ ಕಾರಣಕ್ಕೆ ಹೋರಾಟಗಾರರ ಒತ್ತಡಕ್ಕೆ ಮಣಿದು ಆರೋಪ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸಮೀರ್ ಎಂಡಿ ಸೇರಿ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ SIT ನೋಟೀಸ್
ಅದಾದ ನಂತರ ಮತ್ತೆ ಯೂಟರ್ನ್ ತೆಗೆದುಕೊಂಡು, ಯೂಟ್ಯೂಬರ್ ಒಬ್ಬ ತನಗೆ ಮಗಳೇ ಇರಲಿಲ್ಲ ಎಂದು ಹೇಳುವಂತೆ ಒತ್ತಾಯಿಸಿದ್ದಾನೆ ಎಂದು ಟಿವಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡರು . ನಂತರದ ಎಸ್ಐಟಿ ವಿಚಾರಣೆಯ ಸಮಯದಲ್ಲಿ, ಆಕೆಯ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿರುವುದು ಕಂಡುಬಂತು. ನಂತರ ಸುಜಾತ ಭಟ್ ದೂರನ್ನು ಹಿಂಪಡೆಯುವುದಾಗಿ ಎಸ್ಐಟಿಗೆ ಹೇಳಿದ್ದರು. ಇದೀಗ ಅದೇ ಪ್ರಕರಣದಲ್ಲಿ ಖ್ಯಾತ ನಟನ ಸಹೋದರ ಹೆಸರು ಕೇಳಿಬಂದಿದೆ.
Published On - 10:22 am, Mon, 6 October 25