
ಬೆಳ್ತಂಗಡಿ, ಡಿಸೆಂಬರ್ 31: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆಯಾಗಿದೆ. ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025ರ ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ಮಹೇಶ್ ಕಜೆ ವಕಾಲತ್ತು ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರೋದು ಬಹಿರಂಗವಾಗಿದ್ದರೂ ಆರೋಪಿಗಳ ವಿರುದ್ದ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ವಾದಮಂಡನೆ ನಡೆಯಲಿದೆ. ಎಸ್ಐಟಿ ವರದಿ ಸಂಬಂಧ ಜ.3ರಂದು ಬೆಳ್ತಂಗಡಿ ಕೋರ್ಟ್ ಅದೇಶ ಮಾಡಲಿರುವ ಕಾರಣ ಈ ವಿಚಾರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ಗೆ ಮೇಜರ್ ಟ್ವಿಸ್ಟ್; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!
ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ SIT ತನಿಖೆಯಲ್ಲಿಸಾಬೀತಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರೂ ಆರೋಪಿಗಳು ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್ಐಟಿ ದೃಢಪಡಿಸಿದೆ. ಹಣದ ಆಮಿಷಕ್ಕೆ ಒಳಗಾಗಿ ಎ೧ ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು ಎಂಬುದು ಬಯಲಾಗಿತ್ತು.
ಚಿನ್ನಯ್ಯನಿಗೆ ಮೊದಲಿಂದ ಪರಿಚಿತನಾಗಿದ್ದ ವಿಠ್ಠಲಗೌಡ ಮಹೇಶ್ ತಿಮರೋಡಿ ಮನೆಗೆ ಆತನನ್ನು ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ನಡೆದಿತ್ತು. ಅದರಂತೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು ಎಂಬುದನ್ನು ಎಸ್ಐಟಿ ವರದಿ ಈಗಾಗಲೇ ಬಹಿರಂಗಗೊಳಿಸಿದೆ. ಈ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಕೋರ್ಟ್ನಲ್ಲಿ ವಕಾಲತ್ತು ಸಲ್ಲಿಕೆಯಾಗಿರೋದು ಪ್ರಕರಣಕ್ಕೆ ಹೊಸ ದಿಕ್ಕು ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.